ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ | ಭಾರತದ ಪೂಜಾ ಹೈಜಂಪ್‌ನಲ್ಲಿ ಫೈನಲ್‌ಗೆ

ಲಾಂಗ್‌ಜಂಪ್ ನಲ್ಲಿ ಇಬ್ಬರು ಭಾರತೀಯರು ಪದಕದ ಸುತ್ತಿಗೆ

Update: 2026-08-08 21:51 IST

ಪೂಜಾ | Photo Credit : X

ಹೊಸದಿಲ್ಲಿ,ಆ.8: ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಶುಕ್ರವಾರ ಭಾರತದ ಕ್ರೀಡಾಪಟು ಪೂಜಾ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಪೂಜಾ 1.79 ಮೀ.ಎತ್ತರಕ್ಕೆ ಜಿಗಿದು ಪದಕ ಸುತ್ತಿಗೆ ಲಗ್ಗೆ ಇಟ್ಟರು. ಅರ್ಹತಾ ಸುತ್ತಿನಲ್ಲಿ 12 ಶ್ರೇಷ್ಠ ಅತ್ಲೀಟ್‌ಗಳು ಮುಂದಿನ ಸುತ್ತಿಗೇರುತ್ತಾರೆ.

ಅತ್ಲೀಟ್‌ಗಳು ಫೈನಲ್‌ಗೆ ನೇರ ಪ್ರವೇಶ ಪಡೆಯಲು 1.84 ಮೀ.ಎತ್ತರಕ್ಕೆ ಜಿಗಿಯಬೇಕು. ಆದರೆ ಯಾವೊಬ್ಬ ಜಂಪರ್‌ಗಳು ಈ ಸಾಧನೆ ಮಾಡಿಲ್ಲ. ಎಲ್ಲ 12 ಫೈನಲಿಸ್ಟ್‌ಗಳು 1.79 ಮೀ. ಶ್ರೇಷ್ಠ ಸಾಧನೆಯೊಂದಿಗೆ ಫೈನಲ್‌ಗೆ ತಲುಪಿದ್ದಾರೆ.

ಈ ವರ್ಷಾರಂಭದಲ್ಲಿ ಏಶ್ಯನ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಹರ್ಯಾಣದ ಪೂಜಾ ಅವರು ಸಹನಾ ಕುಮಾರಿ ಹೆಸರಲ್ಲಿದ್ದ 14 ವರ್ಷಗಳ ಹಳೆಯ ಸೀನಿಯರ್ ನ್ಯಾಶನಲ್ ರೆಕಾರ್ಡ್(1.93ಮೀ.) ಪುಡಿಗಟ್ಟಿದ್ದಲ್ಲದೆ ಚಿನ್ನದ ಪದಕ ಜಯಿಸಿದ್ದರು.

ಪುರುಷರ ಲಾಂಗ್‌ಜಂಪ್‌ನಲ್ಲಿ ಕಣದಲ್ಲಿದ್ದ ಇಬ್ಬರು ಭಾರತೀಯರಾದ-ಶಹನವಾಝ್ ಖಾನ್ ಹಾಗೂ ಆರ್.ಸಿ. ಜಿತಿನ್ ಅರ್ಜುನನ್ ನೇರ ಅರ್ಹತಾ ಮಾರ್ಕ್(7.75ಮೀ.)ತಲುಪದೇ ಇದ್ದರೂ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಅರ್ಹತಾ ಸುತ್ತಿನ ‘ಎ’ ಗುಂಪಿನಲ್ಲಿ ಶಹನವಾಝ್(7.73ಮೀ.)ಹಾಗೂ ಜಿತಿನ್(7.57 ಮೀ.)ಕ್ರಮವಾಗಿ ನಾಲ್ಕನೇ ಹಾಗೂ ಏಳನೇಸ್ಥಾನ ಪಡೆದರು. ಒಟ್ಟಾರೆ ಐದನೇ ಹಾಗೂ 12ನೇ ಸ್ಥಾನ ಪಡೆದಿದ್ದಾರೆ.

ನೇರ ಅರ್ಹತಾ ಮಾರ್ಕನ್ನು ಕ್ರಮಿಸುವ ಅಥವಾ ಎರಡು ಗುಂಪುಗಳಲ್ಲಿ ಅಗ್ರ-12ರಲ್ಲಿ ಸ್ಥಾನ ಪಡೆಯುವ ಅತ್ಲೀಟ್‌ಗಳು ಫೈನಲ್‌ಗೆ ಪ್ರವೇಶಿಸುತ್ತಾರೆ.

ಮಹಿಳೆಯರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಪೂನಮ್ ಕೂದಲೆಳೆ ಅಂತರದಿಂದ 12 ಶ್ರೇಷ್ಠ ಥ್ರೋವರ್‌ಗಳ ಪೈಕಿ ಒಬ್ಬರಾಗಿ ಫೈನಲ್ ಸುತ್ತಿಗೇರುವಲ್ಲಿ ವಿಫಲರಾದರು. ಒಟ್ಟಾರೆ 13ನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News