ಈ ಋತುವಿನ ದುಲೀಪ್ ಟ್ರೋಫಿಯ ಹೆಚ್ಚಿನ ಪಂದ್ಯಗಳು TV ಯಲ್ಲಿ ನೇರಪ್ರಸಾರ
BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ | Photo - ANI
ಮುಂಬೈ, ಆ. 9: ಪ್ರಸಕ್ತ ಋತುವಿನಲ್ಲಿ TV ಯಲ್ಲಿ ಪ್ರಸಾರವಾಗುವ ದುಲೀಪ್ ಟ್ರೋಫಿ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದೆ ಹಾಗೂ ಫೈನಲ್ ಪಂದ್ಯವನ್ನು ಕ್ರೀಡಾಂಗಣವೊಂದರಲ್ಲಿ ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪರಿಶೀಲಿಸಲಿದೆ ಎಂದು ಅದರ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ, ಬೆಂಗಳೂರು ನಗರದ ಹೊರವಲಯದಲ್ಲಿರುವ BCCIನ ವಿಶಾಲವಾದ ‘ಸೆಂಟರ್ ಆಫ್ ಎಕ್ಸಲೆನ್ಸ್’ (COE)ನಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು ನಡೆದಿದ್ದವು. ಅದರಿಂದಾಗಿ ಕ್ರೀಡಾಭಿಮಾನಿಗಳು ನಿರಾಶೆಗೊಂಡಿದ್ದರು.
ದೇಶಿ ಕ್ರಿಕೆಟ್ ಋತುವಿನ ಆರಂಭದ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳು TVಯಲ್ಲಿ ಪ್ರಸಾರವಾಗಿರಲಿಲ್ಲ ಮತ್ತು ಇಡೀ ಪಂದ್ಯಾವಳಿಯನ್ನು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಕ್ರೀಡಾಂಗಣದ ಬಾಗಿಲು ಮುಚ್ಚಿ ನಡೆಸಲಾಗಿತ್ತು.
ಆದರೆ, ಆಗಸ್ಟ್ 23ರಿಂದ ಸಿಒಇನಲ್ಲಿ ಪ್ರಾರಂಭವಾಗುವ 2026-27ರ ಆವೃತ್ತಿಯ ದುಲೀಪ್ ಟ್ರೋಫಿಯ ಹೆಚ್ಚಿನ ಪಂದ್ಯಗಳು ದೂರದರ್ಶನದಲ್ಲಿ ನೇರಪ್ರಸಾರಗೊಳ್ಳಲಿವೆ ಎನ್ನುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಕನಿಷ್ಠ ಫೈನಲ್ ಪಂದ್ಯವನ್ನಾದರೂ ಪ್ರೇಕ್ಷಕರು ಕುಳಿತು ವೀಕ್ಷಿಸಲು ಸಾಧ್ಯವಾಗುವ ಸೂಕ್ತ ಕ್ರೀಡಾಂಗಣದಲ್ಲಿ ನಡೆಸುವ ಆಯ್ಕೆಯನ್ನು ಪರಿಶೀಲಿಸುವುದಾಗಿ BCCI ಹೇಳಿದೆ.