ಪ್ರಧಾನಿ ಮೋದಿಯನ್ನು ಭೇಟಿಯಾದ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರು
ಹೊಸದಿಲ್ಲಿ, ಆ. 9: ಪ್ರಧಾನಿ ನರೇಂದ್ರ ಮೋದಿ ರವಿವಾರ ಹೊಸದಿಲ್ಲಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ 2026ರ ಪದಕ ವಿಜೇತರನ್ನು ಭೇಟಿಯಾದರು.
ಗ್ಲಾಸ್ಗೊ ಕ್ರೀಡಾಕೂಟದ ವಿಜೇತರನ್ನು ಅಭಿನಂದಿಸಿದ ಅವರು, ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು. ಈ ಭೇಟಿಯ ವೀಡಿಯೊ ಒಂದನ್ನು ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘‘ಜೋ ಖೇಲೇಗಾ, ವೋ ಖಿಲೇಗಾ (ಯಾರು ಆಡುತ್ತಾರೋ, ಅವರು ಅರಳುತ್ತಾರೆ). ಭಾರತಕ್ಕೆ ಯಾವಾಗಲೂ ಪ್ರೋತ್ಸಾಹ ನೀಡಿ. ಭಾರತ್ ಮಾತಾ ಕಿ ಜೈ’’ ಎಂದು ಹೇಳಿದರು.
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ಲಾಸ್ಗೊ ಕ್ರೀಡಾಕೂಟದಲ್ಲಿ, ವಿಶೇಷವಾಗಿ ಭಾರತೀಯ ಬಾಕ್ಸಿಂಗ್ ತಂಡವು ದಾಖಲೆಯ 10 ಪದಕಗಳನ್ನು ಗೆಲ್ಲುವ ಮೂಲಕ ಯಶಸ್ವಿ ಅಭಿಯಾನವನ್ನು ನಡೆಸಿದೆ. ಏಳು ಭಾರತೀಯ ಬಾಕ್ಸರ್ ಗಳು ಚಿನ್ನದ ಪದಕ ಗೆದ್ದಿದ್ದಾರೆ.
ಭಾರತವು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.
ದೂರ ಅಂತರದ ಓಟಗಾರ ಗುಲ್ವೀರ್ ಸಿಂಗ್ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2030ರ ಕಾಮನ್ವೆಲ್ತ್ ಗೇಮ್ಸ್ ನ ಶತಮಾನೋತ್ಸವ ಆವೃತ್ತಿ ಅಹ್ಮದಾಬಾದ್ ನಲ್ಲಿ ನಡೆಯಲಿದೆ.