ತನ್ನದೇ ದಾಖಲೆ ಮುರಿದ ‘ಬೇಬಿ ಎಬಿ’ ಖ್ಯಾತಿಯ ಬ್ರೆವಿಸ್
ಡೆವಾಲ್ಡ್ ಬ್ರೆವಿಸ್ | PC : @ProteasMenCSA
ಕೈರ್ನ್ಸ್, ಆ.16: ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್, ‘ಬೇಬಿ ಎಬಿ’ ಎಂದೇ ಕರೆಯಲ್ಪಡುತ್ತಿರುವ ಡೆವಾಲ್ಡ್ ಬ್ರೆವಿಸ್ ಅವರು ಆಸ್ಟ್ರೇಲಿಯ ತಂಡದ ವಿರುದ್ಧ ಶನಿವಾರ ನಡೆದ ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ತನ್ನ ದೇಶದ ಪರ ವೇಗದ ಅರ್ಧಶತಕ ದಾಖಲಿಸಿದರು.
ಬ್ರೆವಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕಳೆದ ವಾರ ಡಾರ್ವಿನ್ ನಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಮುರಿದರು. 2ನೇ ಟಿ20 ಪಂದ್ಯದಲ್ಲಿ ಬ್ರೆವಿಸ್ 25 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ್ದರು.
2009ರಲ್ಲಿ ಮೆಲ್ಬರ್ನ್ ನಲ್ಲಿ ಜೆಪಿ ಡುಮಿನಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದಕ್ಷಿಣ ಆಫ್ರಿಕಾದ ಪರ ವೇಗದ ಅರ್ಧಶತಕ ಗಳಿಸಿದ್ದರು.
22ರ ಹರೆಯದ ಬ್ರೆವಿಸ್ ಆಸ್ಟ್ರೇಲಿಯದ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಕ್ಷಿಪ್ರವಾಗಿ ಅರ್ಧಶತಕ ಗಳಿಸಿ ಹಳೆಯ ದಾಖಲೆಯೊಂದನ್ನು ಮುರಿದರು. ಇಂಗ್ಲೆಂಡ್ ಬ್ಯಾಟರ್ ರವಿ ಬೋಪಾರ 2014ರಲ್ಲಿ ಹೊಬರ್ಟ್ ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
ನಾಥನ್ ಎಲ್ಲಿಸ್ 12ನೇ ಓವರ್ ನಲ್ಲಿ ಬ್ರೆವಿಸ್ ಅವರ ಇನಿಂಗ್ಸ್ ಗೆ ತೆರೆ ಎಳೆದರು. ಬ್ರೆವಿಸ್ 26 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಒಳಗೊಂಡ 53 ರನ್ ಗಳಿಸಿ ಔಟಾದ ನಂತರ ದಕ್ಷಿಣ ಆಫ್ರಿಕಾದ ರನ್ ವೇಗಕ್ಕೆ ಕಡಿವಾಣ ಬಿತ್ತು.
ಹಾರ್ಡ್ ಕಟ್ ಶಾಟ್ ಮೂಲಕ ತನ್ನ ಮೊದಲ ಬೌಂಡರಿ ಗಳಿಸಿ ತನ್ನ ಇನಿಂಗ್ಸ್ ನ್ನು ಆಕ್ರಮಣಕಾರಿಯಾಗಿ ಆರಂಭಿಸಿದ ಬ್ರೆವಿಸ್ ಅವರು ಜೋಶ್ ಹೇಝಲ್ ವುಡ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದರು.
ಆ್ಯರೊನ್ ಹಾರ್ಡಿ ಬೌಲಿಂಗ್ ನಲ್ಲಿ 2 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತನ್ನ ಬ್ಯಾಟಿಂಗ್ ಶಕ್ತಿ ಅನಾವರಣಗೊಳಿಸಿದರು. ಹಾರ್ಡಿ ಬೌಲಿಂಗ್ ನಲ್ಲಿ ಇನ್ನೆರಡು ಸಿಕ್ಸರ್ ಸಿಡಿಸಿ ಮುಗಿಬಿದ್ದರು. ಸತತ 4 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದರು.
2ನೇ ಟಿ20 ಪಂದ್ಯದಲ್ಲಿ ಬ್ರೆವಿಸ್ 56 ಎಸೆತಗಳಲ್ಲಿ ಔಟಾಗದೆ 125 ರನ್ ಗಳಿಸಿದ್ದರು. 41 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದ ಬ್ರೆವಿಸ್ ಅವರು ಡೇವಿಡ್ ಮಿಲ್ಲರ್(35 ಎಸೆತ)ನಂತರ ವೇಗದ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು. ಮಿಲ್ಲರ್ 2017ರಲ್ಲಿ ಬಾಂಗ್ಲಾದೇಶ ವಿರುದ್ಧ ಈ ದಾಖಲೆ ನಿರ್ಮಿಸಿದ್ದರು.