ಎಎಫ್‌ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿ | ಭಾರತವನ್ನು 11–0 ಗೋಲಿನಿಂದ ಸೋಲಿಸಿದ ಜಪಾನ್
Photo Credit : PTI
ಪರ್ತ್ (ಆಸ್ಟ್ರೇಲಿಯ), ಮಾ. 7: ಎಎಫ್‌ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿಯಲ್ಲಿ ಶನಿವಾರ ಜಪಾನ್ ತಂಡವು ಭಾರತವನ್ನು 11–0 ಗೋಲುಗಳ ಅಂತರದಿಂದ ಸೋಲಿಸಿದೆ.
ಆಸ್ಟ್ರೇಲಿಯದ ಪರ್ತ್ ರೆಕ್ಟಾಂಗ್ಯುಲರ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಯಾವುದೇ ಪ್ರತಿರೋಧ ತೋರಿಸಲು ವಿಫಲರಾದರು. ಇದು ಈ ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯ ಮಹಿಳೆಯರ ಎರಡನೇ ಅತಿ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು, 2003ರ ಆವೃತ್ತಿಯಲ್ಲಿ ಚೀನಾ ಮಹಿಳೆಯರು ಭಾರತವನ್ನು 12–0 ಗೋಲುಗಳ ಅಂತರದಿಂದ ಸೋಲಿಸಿದ್ದರು.
ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ್ತಿ ಹಿನಟ ಮಿಯಝಾವ ಮತ್ತು ವೆಸ್ಟ್ ಹ್ಯಾಮ್ ಯುನೈಟೆಡ್ ತಂಡದ ಆಟಗಾರ್ತಿ ರಿಕೊ ಯೂಕಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಜಪಾನ್ ತಂಡದ ನಾಯಕಿ ಯೂ ಹಸೆಗವ ಮತ್ತು ಕಿಕೊ ಸೈಕೆ ತಲಾ ಅವಳಿ ಗೋಲುಗಳನ್ನು ಬಾರಿಸಿದರು. ಮಾಯಾ ಹಿಜಿಕಟ ಒಂದು ಗೋಲು ದಾಖಲಿಸಿದರು.
2011ರ ಫಿಫಾ ವಿಶ್ವಕಪ್ ಚಾಂಪಿಯನ್ ಜಪಾನ್ 78 ಶೇಕಡಾ ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿತ್ತು. ಅದು ಗೋಲುಗಳಿಗಾಗಿ 36 ಪ್ರಯತ್ನಗಳನ್ನು ಮಾಡಿತು. ಭಾರತ ಗೋಲಿಗಾಗಿ ಒಂದೂ ಪ್ರಯತ್ನವನ್ನು ಮಾಡಲಿಲ್ಲ.