T20 ವಿಶ್ವಕಪ್ ಫೈನಲ್ | ಪಿಚ್, ಭಾರತೀಯ ಬೌಲಿಂಗ್ ಸವಾಲು: ನ್ಯೂಝಿಲ್ಯಾಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್
ಮಿಚೆಲ್ ಸ್ಯಾಂಟ್ನರ್ | Photo Credit : PTI
ಅಹ್ಮದಾಬಾದ್, ಮಾ. 7: ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ಪಿಚ್‌ನಿಂದ ಏನನ್ನು ನಿರೀಕ್ಷಿಸಬಹುದು ಎನ್ನುವ ಸ್ಪಷ್ಟ ಕಲ್ಪನೆ ನ್ಯೂಝಿಲ್ಯಾಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಗೆ ಇದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ರವಿವಾರ ನಡೆಯಲಿರುವ ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ತಂಡವು ಆತಿಥೇಯ ಭಾರತವನ್ನು ಎದುರಿಸಲಿದೆ.
ಪಂದ್ಯದ ಮುನ್ನಾ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಯಾಂಟ್ನರ್, ‘‘ಜಾಗತಿಕ ದರ್ಜೆಯ’’ ಭಾರತೀಯ ಬೌಲಿಂಗ್ ದಾಳಿ ಮತ್ತು ರನ್ ಹರಿವಿಗಾಗಿ ನಿರ್ಮಿಸಲಾದಂತೆ ಕಂಡುಬರುವ ಪಿಚ್ ಒಡ್ಡಿರುವ ಸವಾಲನ್ನು ಒಪ್ಪಿಕೊಂಡಿದ್ದಾರೆ.
ತಮ್ಮ ತಂಡವು ಫೈನಲ್ ಬಗ್ಗೆ ರೋಮಾಂಚನಗೊಂಡಿದೆ ಎಂದು ಹೇಳಿದ ಅವರು, ತುಂಬಿ ತುಳುಕುವ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಮೇಲೆ ಅಗಾಧ ಒತ್ತಡವಿದೆ ಎಂದು ಅಭಿಪ್ರಾಯಪಟ್ಟರು.
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ ಹೇಳಿಕೆಯನ್ನು ಪುನರುಚ್ಚರಿಸಿದ ಸ್ಯಾಂಟ್ನರ್, ‘‘ನಾನು ಮತ್ತು ನನ್ನ ತಂಡ ಪ್ರೇಕ್ಷಕರ ಬಾಯಿ ಮುಚ್ಚಿಸುವ ಗುರಿಯನ್ನು ಹೊಂದಿದ್ದೇವೆ’’ ಎಂದರು.
‘‘ನಾವು ಪ್ರೇಕ್ಷಕರ ಬಾಯಿ ಮುಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಆದರೆ, ಕ್ರಿಕೆಟ್ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಹಾಗೂ ಅವುಗಳು ಭಿನ್ನವಾಗಿವೆ. ಸ್ವದೇಶದಲ್ಲಿ ಗೆಲುವು ಸಾಧಿಸುವ ಅಗಾಧ ಒತ್ತಡ ಭಾರತದ ಮೇಲಿದೆ ಎಂದು ನನಗನಿಸುತ್ತದೆ’’ ಎಂದು ಅವರು ಹೇಳಿದರು.