ಲಿಯೊನೆಲ್ ಮೆಸ್ಸಿ ಮತ್ತೊಂದು ಮೈಲಿಗಲ್ಲು : 900ನೇ ಗೋಲು ಗಳಿಸುವತ್ತ ಹೆಜ್ಜೆ
ಲಿಯೊನೆಲ್ ಮೆಸ್ಸಿ | Photo Credit : PTI
ನ್ಯೂಯಾರ್ಕ್, ಮಾ.8: ಅರ್ಜೆಂಟೀನದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಗೋಲು ಗಳಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವಾರ ಇಂಟರ್ ಮಿಯಾಮಿ ಪರ ಎರಡು ಗೋಲು ಗಳಿಸಿದ್ದ ಮೆಸ್ಸಿ, ಬಾಲ್ಟಿಮೋರ್‌ನಲ್ಲಿ ಎಂ ಆ್ಯಂಡ್‌ಟಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮೇಜರ್ ಲೀಗ್ ಸಾಕರ್ ಪಂದ್ಯದಲ್ಲಿ ಡಿಸಿ ಯುನೈಟೆಡ್ ತಂಡದ ವಿರುದ್ಧ 27ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇದು ಇಂಟರ್ ಮಿಯಾಮಿ ಪರ ಮೆಸ್ಸಿ ಗಳಿಸಿದ 80ನೇ ಗೋಲಾಗಿದೆ. ವೃತ್ತಿಬದುಕಿನಲ್ಲಿ ಗಳಿಸಿದ 899ನೇ ಗೋಲಾಗಿದೆ. 900 ಗೋಲುಗಳ ಮೈಲಿಗಲ್ಲು ತಲುಪಲು ಕೇವಲ ಒಂದು ಹೆಜ್ಜೆಯಿಂದ ಹಿಂದಿದ್ದಾರೆ.
ಜೂನ್‌ನಲ್ಲಿ 39ನೇ ವಯಸ್ಸಿಗೆ ಕಾಲಿಡಲಿರುವ ಎಂಟು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿ ತನ್ನ ವೃತ್ತಿಜೀವನದ ಆರಂಭದಲ್ಲಿ ಬಾರ್ಸಿಲೋನದ ಪರ 672 ಗೋಲುಗಳನ್ನು ಗಳಿಸಿದ್ದರು. ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಪರ 32 ಗೋಲುಗಳು ಹಾಗೂ ಅರ್ಜೆಂಟೀನದ ಪರ 115 ಅಂತರ್‌ರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ್ದರು.
ಶನಿವಾರದ ಪಂದ್ಯ ಗೆಲ್ಲುವ ಮೂಲಕ ಇಂಟರ್ ಮಿಯಾಮಿ ತಂಡವು ಅಂಕಪಟ್ಟಿಯಲ್ಲಿ ಮೂರು ಪಂದ್ಯಗಳಲ್ಲಿ ಆರಂಕವನ್ನು ಗಳಿಸಿ ಮೂರನೇ ಸ್ಥಾನಕ್ಕೇರಿದೆ.