×
Ad

ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳ ಸ್ವದೇಶ ಪ್ರಯಾಣಕ್ಕೆ ವಿಶೇಷ ವಿಮಾನ

Update: 2026-03-07 21:52 IST

Photo Credit ; PTI

ಮುಂಬೈ, ಮಾ. 7: ಪಶ್ಚಿಮ ಏಶ್ಯದಲ್ಲಿ ನೆಲೆಸಿರುವ ಸಂಘರ್ಷ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ಸ್ವದೇಶ ಪ್ರಯಾಣಕ್ಕೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ವಿಶೇಷ ವಿಮಾನಗಳ ಏರ್ಪಾಡು ಮಾಡಿದೆ. ಈ ತಂಡಗಳು ವಾರಾಂತ್ಯದಲ್ಲಿ ತಮ್ಮ ದೇಶಗಳಿಗೆ ಪ್ರಯಾಣಿಸಲಿವೆ.

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ವಾಯು ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ತನ್ನ ನೆರೆ ದೇಶಗಳ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಗಳಿಂದಾಗಿ ಪಶ್ಚಿಮ ಏಶ್ಯ ತತ್ತರಿಸಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಇಂಗ್ಲೆಂಡ್ ತಂಡದ ಸದಸ್ಯರು ಶನಿವಾರ ಸಂಜೆ ವಿಶೇಷ ವಿಮಾನವೊಂದರಲ್ಲಿ ಸ್ವದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂಬುದಾಗಿ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಗುರುವಾರ ನಡೆದ ಎರಡನೇ ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಸೋಲನುಭವಿಸಿತ್ತು.

ಟಿ20 ವಿಶ್ವಕಪ್‌ ನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕ ತಂಡಗಳ ಅಭಿಯಾನ ಕೊನೆಗೊಂಡಿದ್ದರೂ, ವಿಮಾನ ಹಾರಾಟ ಸ್ಥಗಿತದ ಹಿನ್ನೆಲೆಯಲ್ಲಿ ಅವುಗಳೂ ಭಾರತದಲ್ಲೇ ಉಳಿದುಕೊಂಡಿವೆ.

ಕೋಲ್ಕತಾದಲ್ಲಿ ರವಿವಾರ ನಡೆದ ಸೂಪರ್ ಎಂಟು ಪಂದ್ಯದಲ್ಲಿ ಭಾರತದ ವಿರುದ್ಧ ಸೋಲುವ ಮೂಲಕ ವೆಸ್ಟ್ ಇಂಡೀಸ್‌ನ ಅಭಿಯಾನ ಕೊನೆಗೊಂಡಿತ್ತು. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋತ ಬಳಿಕ ದಕ್ಷಿಣ ಆಫ್ರಿಕದ ಅಭಿಯಾನ ಕೊನೆಗೊಂಡಿತ್ತು.

ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಇನ್ನೊಂದು ವಿಶೇಷ ವಿಮಾನದಲ್ಲಿ ಕೋಲ್ಕತಾದಿಂದ ಜೊತೆಯಾಗಿ ಪ್ರಯಾಣಿಸಲಿದ್ದಾರೆ. ಎರಡು ತಂಡಗಳು ಮೊದಲು ಜೊಹಾನ್ಸ್‌ಬರ್ಗ್‌ಗೆ ಪ್ರಯಾಣಿಸಲಿವೆ. ಅಲ್ಲಿಂದ ವೆಸ್ಟ್ ಇಂಡೀಸ್ ಆಟಗಾರರು ಆಂಟಿಗಾಗೆ ಪ್ರಯಾಣವನ್ನು ಮುಂದುವರಿಸಲಿದ್ದಾರೆ. ಈ ವಿಮಾನವು ರವಿವಾರ ಕೋಲ್ಕತಾದಿಂದ ಹೊರಡುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News