×
Ad

ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು | ಕೊನೆಗೂ ಸ್ವದೇಶಕ್ಕೆ ಪ್ರಯಾಣ ಬೆಳೆಸಿದ ಝಿಂಬಾಬ್ವೆ ಕ್ರಿಕೆಟ್ ತಂಡ

Update: 2026-03-05 20:16 IST

Photo Credit : PTI 

ಹೊಸದಿಲ್ಲಿ: ಐಸಿಸಿ ಆಯೋಜಿತ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಭಾರತದಲ್ಲೇ ಸಿಲುಕಿಕೊಂಡಿದ್ದ ಝಿಂಬಾಬ್ವೆ ಕ್ರಿಕೆಟ್ ತಂಡವು ಕೊನೆಗೂ ಸ್ವದೇಶಕ್ಕೆ ಪ್ರಯಾಣ ಬೆಳೆಸಿದೆ. ಸ್ವತಃ ಝಿಂಬಾಬ್ವೆ ಕ್ರಿಕೆಟ್ ಮಂಡಳಿಯು ಬುಧವಾರ ಇದನ್ನು ಖಚಿತಪಡಿಸಿದೆ.

ಪಶ್ಚಿಮ ಏಶ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ವಾಯುಪ್ರದೇಶದಲ್ಲಿ ನಿರ್ಬಂಧ ಹೇರಿದ ಕಾರಣ ಝಿಂಬಾಬ್ವೆ ತಂಡ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗಿರಲಿಲ್ಲ. ಇದೀಗ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು(ಐಸಿಸಿ)ಝಿಂಬಾಬ್ವೆ ಕ್ರಿಕೆಟ್ ತಂಡ ವಾಪಸಾಗಲು ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಿದೆ.

‘ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಉಂಟಾದ ಅಡೆತಡೆಯ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪರ್ಯಾಯ ಪ್ರಯಾಣದ ವ್ಯವಸ್ಥೆಗಳನ್ನು ಮಾಡಿದ್ದು, ಐಸಿಸಿ ಆಯೋಜಿತ ಪುರುಷರ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಝಿಂಬಾಬ್ವೆಯ ಹಿರಿಯರ ಪುರುಷರ ತಂಡವು ಭಾರತದಿಂದ ಸ್ವದೇಶಕ್ಕೆ ವಾಪಸಾಗುತ್ತಿದೆ’ ಎಂದು ಝಿಂಬಾಬ್ವೆ ಕ್ರಿಕೆಟ್ ಎಕ್ಸ್‌ನಲ್ಲಿ ದೃಢಪಡಿಸಿದೆ.

ವಿಮಾನ ಲಭ್ಯವಾದ ಕಾರಣ, ಪರಿಷ್ಕೃತ ಮಾರ್ಗದಲ್ಲಿ ತಂಡವು ಬೇರೆ ಬೇರೆ ಗುಂಪುಗಳಾಗಿ ಹರಾರೆಗೆ ವಾಪಸಾಗುತ್ತಿವೆ. ಆಟಗಾರರ ಮೊದಲ ಗುಂಪು ಬುಧವಾರ ನಿರ್ಗಮಿಸಿದೆ. ಕೊನೆಯ ಗುಂಪು ಶುಕ್ರವಾರ ಮಧ್ಯಾಹ್ನ ಹೊರಡಲಿದೆ. ಅಗತ್ಯವಿದ್ದರೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ಝಿಂಬಾಬ್ವೆ ಕ್ರಿಕೆಟ್ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.

ಝಿಂಬಾಬ್ವೆ ಕ್ರಿಕೆಟ್ ತಂಡವು ರವಿವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಂದ್ಯಾವಳಿಯಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿತ್ತು. ತಂಡವು ಸೋಮವಾರದಂದು ದುಬೈ ಮೂಲಕ ಹರಾರೆಗೆ ವಾಪಸಾಗಲು ಈ ಮೊದಲು ಯೋಜಿಸಿತ್ತು.

ಆಟಗಾರರು ಹಾಗೂ ಸಿಬ್ಬಂದಿ ದಿಲ್ಲಿಯಿಂದ ದುಬೈಗೆ, ಆ ನಂತರ ಹರಾರೆಗೆ ತೆರಳಲು ಎಮಿರೇಟ್ಸ್ ವಿಮಾನಗಳನ್ನು ಬುಕ್ ಮಾಡಿದ್ದರು. ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ ನಂತರ ಹಲವಾರು ದೇಶಗಳು ತಮ್ಮ ವಾಯು ಪ್ರದೇಶಗಳನ್ನು ಮುಚ್ಚಿದ ಕಾರಣ ಏರ್‌ಲೈನ್ಸ್‌ಗಳು ತಮ ವಿಮಾನಗಳನ್ನು ರದ್ದುಪಡಿಸಿದವು, ಕೆಲವು ಮಾರ್ಗಗಳನ್ನು ಬದಲಿಸಿದವು. ಇದರಿಂದ ಝಿಂಬಾಬ್ವೆ ತಂಡದ ಯೋಜನೆಯು ಬದಲಾಗಿದೆ.

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಕ್ಷಿಪಣಿ ದಾಳಿ ಹೆಚ್ಚಾದ ನಂತರ ವಿಮಾನ ಹಾರಾಟ ವ್ಯತ್ಯಯವಾಯಿತು. ಈ ಪರಿಸ್ಥಿತಿಯಿಂದಾಗಿ ದುಬೈ ಮೂಲಕ ಪ್ರಯಾಣಿಸುವ ಹಲವಾರು ಅಂತರ್‌ರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ಪರಿಣಾಮಬೀರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News