ಐಸಿಸಿ ಟೂರ್ನಿಯಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಭಾರತ ಕ್ರಿಕೆಟ್ ತಂಡ
Photo Credit : BCCI/X
ಹೊಸದಿಲ್ಲಿ, ಮಾ.6: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿರುವ ಭಾರತ ಕ್ರಿಕೆಟ್ ತಂಡವು ಐಸಿಸಿ ಟೂರ್ನಿಗಳಲ್ಲಿ ಮಹತ್ವದ ದಾಖಲೆಯ ವಿಚಾರದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದೆ.
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವ ಭಾರತ ತಂಡವು ರವಿವಾರ ಅಹ್ಮದಾಬಾದ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡವು ಈ ಹಿಂದೆ 2007, 2014 ಹಾಗೂ 2024ರಲ್ಲಿ ಫೈನಲ್‌ಗೆ ತಲುಪಿತ್ತು. ಈ ತನಕ ಯಾವ ತಂಡ ಕೂಡ ಈ ಸಾಧನೆ ಮಾಡಿಲ್ಲ. ಶ್ರೀಲಂಕಾ, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಮೂರು ಬಾರಿ ಫೈನಲ್‌ನಲ್ಲಿ ಕಾಣಿಸಿಕೊಂಡಿವೆ.
ಟೀಮ್ ಇಂಡಿಯಾವು ಪುರುಷರ ಟಿ-20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಹಾಲಿ ಚಾಂಪಿಯನ್ ತಂಡವಾಗಿದೆ.
ಐತಿಹಾಸಿಕವಾಗಿ ಈ ಸ್ಪರ್ಧಾವಳಿಯಲ್ಲಿ ಪದೇ ಪದೇ ಫೈನಲ್‌ಗೆ ತಲುಪುವುದು ಅಪರೂಪ. ಪಾಕಿಸ್ತಾನ(2007 ಹಾಗೂ 2009) ಹಾಗೂ ಶ್ರೀಲಂಕಾ(2012 ಹಾಗೂ 2014)ತಂಡಗಳು ಈ ಹಿಂದೆ ಸತತ ಆವೃತ್ತಿಗಳಲ್ಲಿ ಪ್ರಶಸ್ತಿ ಸುತ್ತಿಗೆ ತಲುಪುವಲ್ಲಿ ಶಕ್ತವಾಗಿದ್ದವು.
ರವಿವಾರ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿರುವ ಭಾರತ ತಂಡವು ಪುರುಷರ ಐಸಿಸಿ ಪಂದ್ಯಾವಳಿಯಲ್ಲಿ 15ನೇ ಬಾರಿ ಫೈನಲ್‌ಗೆ ತಲುಪಿದೆ. ಆಸ್ಟ್ರೇಲಿಯ(14)ವನ್ನು ಹಿಂದಿಕ್ಕಿರುವ ಭಾರತವು ಅತ್ಯಂತ ಹೆಚ್ಚು ಬಾರಿ ಈ ಸಾಧನೆ ಮಾಡಿದ ತಂಡವಾಗಿದೆ.