ಪಶ್ಚಿಮ ಏಶ್ಯ ಸಂಘರ್ಷ | ಭಾರತದಲ್ಲಿ ಸಿಲುಕಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ವದೇಶ ಪ್ರಯಾಣಕ್ಕೆ ವಿಶೇಷ ವಿಮಾನ
Photo Credit : PTI
ಕೋಲ್ಕತಾ: ಪಶ್ಚಿಮ ಏಶ್ಯ ಸಂಘರ್ಷದಿಂದಾಗಿ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ವಿಶೇಷ ವಿಮಾನವೊಂದರ ವ್ಯವಸ್ಥೆ ಮಾಡಲಾಗಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಮಾರ್ಚ್ ಒಂದರಂದು ನಡೆದ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಸೋತು ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಆದರೆ, ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ವಿಮಾನ ಹಾರಾಟಗಳು ರದ್ದಾದ ಬಳಿಕ ಕೋಲ್ಕತಾದಲ್ಲೇ ಸಿಕ್ಕಿಹಾಕಿಕೊಂಡಿತ್ತು.
ತಂಡವು ಈಗ ವಿಶೇಷ ವಿಮಾನವೊಂದರಲ್ಲಿ ಸ್ವದೇಶಕ್ಕೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ.
ವೆಸ್ಟ್ ಇಂಡೀಸ್ ತಂಡವು ಆಂಟಿಗಕ್ಕೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮೂಲಗಳು ತಿಳಿಸಿವೆ. ದಿನಾಂಕ ಮತ್ತು ಸಮಯದ ಕುರಿತ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದಕ್ಕೂ ಮುನ್ನ ಗುರುವಾರ, ವೆಸ್ಟ್ ಇಂಡೀಸ್ ತಂಡದ ಕೋಚ್ ಡ್ಯಾರನ್ ಸ್ಯಾಮಿ, ತಂಡದ ವಾಪಸಾತಿಯ ಬಗೆ ಸ್ಪಷ್ಟನೆ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದನ್ನು ಹಾಕಿದ್ದರು. ‘‘ನಾನು ಮನೆಗೆ ಹೋಗಲು ಬಯಸುತ್ತೇನೆ. ಕನಿಷ್ಠ ಒಂದು ಮಾಹಿತಿ ಕೊಡಿ. ಇಂದು, ನಾಳೆ, ಮುಂದಿನ ವಾರ. ಈಗಾಗಲೇ 5 ದಿನಗಳಾಗಿವೆ’’ ಎಂದು ಅವರು ಬರೆದಿದ್ದರು.