ಟಿ-20 ವಿಶ್ವಕಪ್ | ‘ಸರಣಿಶ್ರೇಷ್ಠ’ ಪ್ರಶಸ್ತಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ | Photo Credit : PTI
ಹೊಸದಿಲ್ಲಿ, ಮಾ.6: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್‌ನ ಆರಂಭದಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದ ಆಡುವ 11ರ ಬಳಗದ ಖಾಯಂ ಆಟಗಾರನಾಗಿರಲಿಲ್ಲ. ಪ್ರಮುಖ ಸಂದರ್ಭದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿರುವ ಕೇರಳದ ಬ್ಯಾಟರ್ ಪಂದ್ಯಾವಳಿಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.
31ರ ಹರೆಯದ ಬಲಗೈ ಬ್ಯಾಟರ್ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ ಸೂಪರ್-8ರಲ್ಲಿ ಔಟಾಗದೆ 97 ರನ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಸೆಮಿ ಫೈನಲ್‌ನಲ್ಲಿ 89 ರನ್ ಗಳಿಸಿದ್ದರು. ಇತ್ತೀಚೆಗೆ ವೀರೋಚಿತ ಪ್ರದರ್ಶನ ನೀಡಿದ ಹೊರತಾಗಿಯೂ ಸ್ಯಾಮ್ಸನ್ ಅವರು ಗ್ರೂಪ್ ಹಂತದಲ್ಲಿ ಭಾರತದ ಮೊದಲ ಆಯ್ಕೆಯ ಆಟಗಾರನಾಗಿರಲಿಲ್ಲ. ವಿಶ್ವಕಪ್ ಟೂರ್ನಿಗಿಂತ ಮೊದಲು ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್ ಉತ್ತಮ ಫಾರ್ಮ್‌ನಲ್ಲಿರಲಿಲ್ಲ.
ಅಭಿಷೇಕ್ ಶರ್ಮಾ ಅನಾರೋಗ್ಯದಿಂದಾಗಿ ಆಡುವ 11ರ ಬಳಗದಿಂದ ಹೊರಗುಳಿದ ಕಾರಣ ಹೊಸದಿಲ್ಲಿಯಲ್ಲಿ ನಡೆದಿದ್ದ ನಮೀಬಿಯಾ ತಂಡದ ವಿರುದ್ಧ ಪಂದ್ಯದಲ್ಲಿ ಸ್ಯಾಮ್ಸನ್ ಆಡುವ ಅವಕಾಶ ಪಡೆದಿದ್ದರು.
ಸ್ಯಾಮ್ಸನ್‌ಗೆ ಸೂಪರ್-8ರ ಹಂತದಲ್ಲಿ ಟರ್ನಿಂಗ್‌ಪಾಯಿಂಟ್ ಲಭಿಸಿತು. ಆಫ್ ಸ್ಪಿನ್ನರ್‌ಗಳು ಅಭಿಷೇಕ್ ಹಾಗೂ ಇಶಾನ್ ಕಿಶನ್‌ಗೆ ಸಮಸ್ಯೆಯೊಡ್ಡುತ್ತಿದ್ದಾಗ ಟೀಮ್ ಮ್ಯಾನೇಜ್‌ಮೆಂಟ್ ಸ್ಯಾಮ್ಸನ್‌ಗೆ ಮತ್ತೊಮ್ಮೆ ಅವಕಾಶ ನೀಡಿತು. ಆಡುವ ಬಳಗಕ್ಕೆ ವಾಪಸಾದ ನಂತರ ಸ್ಯಾಮ್ಸನ್ ಅವರು ಪರಿಣಾಮಕಾರಿ ಪ್ರದರ್ಶನ ನೀಡಿದ್ದು, ಸ್ಪರ್ಧಾವಳಿಯಲ್ಲಿ ಭಾರತದ ಓರ್ವ ಅತ್ಯಂತ ಉತ್ತಮ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ತನ್ನ ಶ್ರೇಷ್ಠಫಾರ್ಮ್‌ನಿಂದಾಗಿ ಪಂದ್ಯಾವಳಿಯಲ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಂತಿಮ ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ವಿಲ್ ಜಾಕ್ಸ್, ಸಾಹಿಬ್‌ಝದಾ ಫರ್ಹಾನ್, ಲುಂಗಿ ಗಿಡಿ, ಮರ್ಕ್ರಮ್, ರಚಿನ್ ರವೀಂದ್ರ ಹಾಗೂ ಟಿಮ್ ಸೀಫರ್ಟ್ ಸ್ಪರ್ಧೆಯಲ್ಲಿದ್ದಾರೆ.
ಭಾರತ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಏಳು ರನ್‌ನಿಂದ ರೋಚಕವಾಗಿ ಗೆದ್ದ ನಂತರ ಐಸಿಸಿ, ಸರಣಿಶ್ರೇಷ್ಠರ ಕಿರು ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸೆಮಿ ಫೈನಲ್ ಪಂದ್ಯದಲ್ಲಿ ಸ್ಯಾಮ್ಸನ್ 15 ರನ್ ಗಳಿಸಿದ್ದಾಗ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಜೀವದಾನ ನೀಡಿದ್ದರು. ಈ ಜೀವದಾನವು ಇಂಗ್ಲೆಂಡ್‌ಗೆ ದುಬಾರಿಯಾಗಿ ಪರಿಣಮಿಸಿದ್ದು, ಭಾರತದ ಬ್ಯಾಟರ್ ಕೇವಲ 42 ಎಸೆತಗಳಲ್ಲಿ ಏಳು ಸಿಕ್ಸರ್‌ಗಳ ಸಹಿತ 89 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ ಒಟ್ಟು 15 ಸಿಕ್ಸರ್‌ಗಳನ್ನು ಸಿಡಿಸಿ ರೋಹಿತ್ ಶರ್ಮಾರ ದಾಖಲೆ(15)ಯನ್ನು ಮುರಿದಿದ್ದಾರೆ.
ಸ್ಯಾಮ್ಸನ್ ಈ ತನಕ ಪಂದ್ಯಾವಳಿಯಲ್ಲಿ ಒಟ್ಟು 232 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ನಂತರ ಭಾರತದ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಸ್ಯಾಮ್ಸನ್ ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಮಿ ಫೈನಲ್ ಗೆಲುವಿನ ನಂತರ ಪ್ರತಿಕ್ರಿಯಿಸಿದ ಸ್ಯಾಮ್ಸನ್, ‘‘ಸುಮಾರು 500 ರನ್ ಹರಿದು ಬಂದಿರುವ ಗರಿಷ್ಠ ಮೊತ್ತದ ಸ್ಪರ್ಧೆಯಲ್ಲಿ ತನ್ನ ನಾಲ್ಕು ಓವರ್‌ಗಳಲ್ಲಿ ಕೇವಲ 33 ರನ್ ಬಿಟ್ಟುಕೊಟ್ಟಿರುವ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾಗೆ ಈ ಗೌರವ ಸಲ್ಲಬೇಕಾಗಿತ್ತು’’ ಎಂದು ಹೇಳಿದ್ದಾರೆ.