×
Ad

ಡೆಲ್ಲಿ ಪ್ರೀಮಿಯರ್‌ ಲೀಗ್‌: ಹರಾಜಿನಲ್ಲಿ ವಿರೇಂದ್ರ ಸೆಹ್ವಾಗ್ ಪುತ್ರ, ವಿರಾಟ್ ಕೊಹ್ಲಿಯ ಸೋದರಳಿಯನಿಗೆ ಬೇಡಿಕೆ

Update: 2026-07-02 18:32 IST

ವಿರಾಟ್ ಕೊಹ್ಲಿ , ವಿರೇಂದ್ರ ಸೆಹ್ವಾಗ್ |  Photo Credit : PTI 

ಹೊಸದಿಲ್ಲಿ: ದಿಲ್ಲಿ ಪ್ರೀಮಿಯರ್ ಲೀಗ್ ಗಾಗಿ ನಡೆಯುತ್ತಿರುವ ಹರಾಜಿನಲ್ಲಿ ಖ್ಯಾತನಾಮರ ಉಪ ನಾಮ ಹೊಂದಿರುವ ಆಟಗಾರರಿಗೆ ಬೇಡಿಕೆ ಕಂಡು ಬಂದಿದ್ದು, ಭಾರತ ತಂಡದ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ನನ್ನು ಸೆಂಟ್ರಲ್ ದಿಲ್ಲಿ ಕಿಂಗ್ಸ್ ಫ್ರಾಂಚೈಸಿ 1 ಲಕ್ಷ ರೂ. ತೆತ್ತು ಖರೀದಿಸಿದೆ. ಮತ್ತೊಂದೆಡೆ, ಭಾರತ ತಂಡದ ಮತ್ತೊಬ್ಬ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 16 ವರ್ಷದ ಸೋದರಳಿಯ ಆರ್ಯವೀರ್ ಕೊಹ್ಲಿಯನ್ನೂ ಸೆಂಟ್ರಲ್ ದಿಲ್ಲಿ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ.

ದಿಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಸೆಂಟ್ರಲ್ ದಿಲ್ಲಿ ಕಿಂಗ್ಸ್ ಖರೀದಿಸಿರುವ ವಿರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಗೆ ಈಗಿನ್ನೂ 16 ವರ್ಷ ಮಾತ್ರ. ಅವರಿನ್ನೂ ತನ್ನ ಕ್ರಿಕೆಟ್ ಪಯಣದ ಆರಂಭದಲ್ಲಿದ್ದರೂ, ಈಗಾಗಲೇ ಸಾಕಷ್ಟು ಗಮನ ಸೆಳೆದಿದ್ದಾರೆ.

ಕಳೆದ ವರ್ಷ ವೆಸ್ಟ್ ದಿಲ್ಲಿ ಲಯನ್ಸ್ ಫ್ರಾಂಚೈಸಿ ವೇದಾಂತ್ ರನ್ನು ಖರೀದಿಸಿತ್ತು. ಈ ಬಾರಿ ಮತ್ತೆ ಹರಾಜು ಪ್ರಕ್ರಿಯೆಗೆ ಮರಳಿರುವ ವೇದಾಂತ್, ಬೇರೊಂದು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಮ್ಮ ತಂದೆಯಂತೆ ವೇದಾಂತ್ ಬಿರುಸಿನ ಬ್ಯಾಟರ್ ಅಲ್ಲ. ಅವರೊಬ್ಬ ಬಲಗೈ ಆಫ್ ಸ್ಪಿನ್ನರ್ ಆಲ್ ರೌಂಡರ್. ಆದರೆ, ಅವರು ಬೌಲಿಂಗ್ ನಲ್ಲಿ ಈಗಾಗಲೇ ಸಾಕಷ್ಟು ಗಮನ ಸೆಳೆದಿದ್ದಾರೆ. 2024ರ ಪದಾರ್ಪಣೆ ವರ್ಷದಲ್ಲಿ ಅವರು ದಿಲ್ಲಿ ಅಂಡರ್ 16 ತಂಡದ ಪರವಾಗಿ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಆಟವಾಡಿದ್ದರು. ಅವರು ಈ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ನಾಲ್ಕು ವಿಕೆಟ್ ಗಳನ್ನು ಕಿತ್ತಿದ್ದರು.

ವಿರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲಿ 8 ಲಕ್ಷ ರೂ.ಗೆ ಮಾರಾಟವಾಗಿ ಗಮನ ಸೆಳೆದಿದ್ದರು. ಒಂದು ಪಂದ್ಯವಾಡಿದ್ದ ಅವರು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಈ ಬಾರಿ ಅವರನ್ನು ವೆಸ್ಟ್ ದಿಲ್ಲಿ ಲಯನ್ಸ್ ಫ್ರಾಂಚೈಸಿ 3 ಲಕ್ಷ ರೂ.ಗೆ ಖರೀದಿಸಿದೆ.

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಸೋದರಳಿಯ ಆರ್ಯವೀರ್ ಕೊಹ್ಲಿಯಯನ್ನು ಸೆಂಟ್ರಲ್ ದಿಲ್ಲಿ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ. ಅವರು ಕಳೆದ ಬಾರಿ ದಕ್ಷಿಣ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿ ಪರವಾಗಿ ಆಡಿದ್ದರು.

ದಿಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಗಮನ ಸೆಳೆದಿರುವ ಮತ್ತೊಂದು ಹೆಸರು ಸಾರ್ಥಕ್ ರಂಜನ್. ಇವರು ಬಿಹಾರ ರಾಜಕಾರಣಿ ಪಪ್ಪು ಯಾದವ್ ಪುತ್ರ. ನಾರ್ತ್ ದಿಲ್ಲಿ ಸ್ಟ್ರೈಕರ್ಸ್ ತಂಡದ ಪರವಾಗಿ ಆಡಲಿರುವ ಸಾರ್ಥಕ್ ರಂಜನ್ ರನ್ನು 17 ಲಕ್ಷ ರೂ. ದುಬಾರಿ ಬೆಲೆ ತೆತ್ತು ಖರೀದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News