FIFA 2026 | ಅಂತಿಮ 32ರ ಪಂದ್ಯದಲ್ಲಿ ಸೆನೆಗಲ್‌ಗೆ ವೀರೋಚಿತ ಸೋಲು : ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿದ ಬೆಲ್ಜಿಯಂ
Photo Credit : AP , PTI
ಸಿಯಾಟಲ್, ಜು.2: ಎರಡು ಗೋಲುಗಳ ಹಿನ್ನಡೆಯಿಂದ ಪುಟಿದೆದ್ದ ಬೆಲ್ಜಿಯಂ ತಂಡವು ಹೆಚ್ಚುವರಿ ಸಮಯದಲ್ಲಿ ಸೆನೆಗಲ್ ತಂಡವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಗುರುವಾರ ನಡೆದ ಅಂತಿಮ-32ರ ಪಂದ್ಯದಲ್ಲಿ ‘ರೆಡ್ ಡೆವಿಲ್ಸ್’ ಖ್ಯಾತಿಯ ಬೆಲ್ಜಿಯಂ ತಂಡ ಒಂದು ಹಂತದಲ್ಲಿ ಟೂರ್ನಿಯಿಂದ ನಿರ್ಗಮಿಸುವ ಹಾದಿಯಲ್ಲಿತ್ತು. ಅಸಾಧಾರಣ ರೀತಿಯಲ್ಲಿ ಪುಟಿದೆದ್ದ ಬೆಲ್ಜಿಯಂ ತಂಡ ರೋಮಾಂಚಕಾರಿ ಗೆಲುವು ದಾಖಲಿಸಿತು.
ಬದಲಿ ಆಟಗಾರ ರೊಮೆಲು ಲುಕಾಕು 86ನೇ ನಿಮಿಷದಲ್ಲಿ ಗೋಲು ಗಳಿಸಿ ಬೆಲ್ಜಿಯಂ ತಂಡವು ಮರು ಹೋರಾಡುವ ವಿಶ್ವಾಸ ಮೂಡಿಸಿದರು. ನಾಯಕ ಯೂರಿ ಟೈಲ್‌ಮನ್ಸ್ 89ನೇ ನಿಮಿಷ ಹಾಗೂ 125ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಹಿಂದಿನ 11 ಫಿಫಾ ವಿಶ್ವಕಪ್ ಟೂರ್ನಿಗಳಲಿ ಎರಡನೇ ಬಾರಿ ತಂಡವೊಂದು ನಾಕೌಟ್ ಪಂದ್ಯದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡು ಮುಂದಿನ ಸುತ್ತಿಗೇರಿದೆ.
ಬೆಲ್ಜಿಯಂ ತಂಡವು ಎರಡನೇ ಬಾರಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ವಿಶ್ವಕಪ್‌ನ ನಾಕೌಟ್ ಪಂದ್ಯವನ್ನು ಜಯಿಸಿದೆ. ಈ ಹಿಂದೆೆ 2018ರ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡದ ವಿರುದ್ಧ 0-2 ಹಿನ್ನಡೆಯಿಂದ ಚೇತರಿಸಿಕೊಂಡು 3-2 ಅಂತರದಿಂದ ರೋಚಕ ಜಯ ಸಾಧಿಸಿತ್ತು.
ಸೆನೆಗಲ್ ತಂಡವು ಅಂತಿಮ-32ರ ಸುತ್ತಿನ ಪಂದ್ಯದ ಬಹುತೇಕ ಅವಧಿಯಲ್ಲಿ ಪ್ರಾಬಲ್ಯ ಸಾಧಿಸಿದಾಗ ಬೆಲ್ಜಿಯಂ ತಂಡ ಪಂದ್ಯಾವಳಿಯಿಂದ ಹೊರಬೀಳುವ ಭೀತಿಯಲ್ಲಿತ್ತು.
25ನೇ ನಿಮಿಷದಲ್ಲಿ ಗೋಲು ಗಳಿಸಿದ ಹಬೀಬ್ ಅವರು ಸೆನೆಗಲ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇಸ್ಮಾಯೀಲ್ 51ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಸೆನೆಗಲ್ ತಂಡದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಇಸ್ಮಾಯೀಲ್ ಅವರು ಮೌಸಾ ನಿಯಾಖಾಟ್ ನೀಡಿದ ಲಾಂಗ್ ಪಾಸ್‌ನ ನೆರವಿನಿಂದ ಬೆಲ್ಜಿಯಂನ ಹಿರಿಯ ಗೋಲ್‌ಕೀಪರ್ ಥಿಬೌಟ್ ಕೋರ್ಟೊಯಿಸ್‌ರನ್ನು ವಂಚಿಸಿ ಗೋಲು ಗಳಿಸಿದರು.
ನಿರ್ಣಾಯಕ ಗೋಲುಗಳನ್ನು ಉಳಿಸಿದ ಥಿಬೌಟ್ ಅವರು ಬೆಲ್ಜಿಯಂ ತಂಡ ಸ್ಪರ್ಧೆಯಲ್ಲಿರುವಂತೆ ನೋಡಿಕೊಂಡರು.
ಬದಲಿ ಆಟಗಾರನಾಗಿ ಕಣಕ್ಕಿಳಿದ ಲುಕಾಕು 86ನೇ ನಿಮಿಷದಲ್ಲಿ ಗೋಲು ಗಳಿಸಿ ಬೆಲ್ಜಿಯಂ ತಂಡವು ಮರು ಹೋರಾಟ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ ಮೂರು ನಿಮಿಷದ ನಂತರ ಯೂರಿ ಟೈಲ್‌ಮನ್ಸ್ ಗೋಲು ಗಳಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು. ಸೆನೆಗಲ್ ತಂಡಕ್ಕೆ ಶಾಕ್ ನೀಡಿದ ಯೂರಿ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲು ಕಾರಣರಾದರು.
ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲು ಕೆಲವೇ ಸೆಕೆಂಡ್ ಬಾಕಿ ಇರುವಾಗ ಯೂರಿ ಅವರನ್ನು ಪೆನಾಲ್ಟಿ ಏರಿಯಾದಲ್ಲಿ ಸೆನೆಗಲ್ ಆಟಗಾರ ಲ್ಯಾಮಿನ್ ಕ್ಯಾಮರಾ ಕೆಳಕ್ಕೆ ಬೀಳಿಸಿದರು. ವಿಎಆರ್ ಪರಿಶೀಲನೆಯ ನಂತರ ರೆಫರಿ ಅವರು ಪೆನಾಲ್ಟಿ ಕಿಕ್‌ಗೆ ಅವಕಾಶ ನೀಡಿದರು.
ಬೆಲ್ಜಿಯಂನ ಮಿಡ್‌ಫೀಲ್ಡರ್ ಯೂರಿ 125ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸುವಲ್ಲಿ ಶಕ್ತರಾದರು.
ನಾಟಕೀಯ ರೀತಿಯಲ್ಲಿ ಗೆಲುವು ಕೈ ತಪ್ಪಿ ಹೋಗುವುದನ್ನು ನೋಡಿದ ಸೆನೆಗಲ್ ಅಟಗಾರರು ದಂಗಾಗಿ ಹೋದರು.
ಬೆಲ್ಜಿಯಂ ತಂಡಕ್ಕೆ ಪೆನಾಲ್ಟಿ ಕಿಕ್ ಅವಕಾಶ ನೀಡಿದ ನಂತರ ರೆಫರಿಯನ್ನು ಸೆನೆಗಲ್ ಆಟಗಾರರು ಸುತ್ತುವರಿದರು. ಡಿಫೆಂಡರ್ ಪ್ಯಾಥ್ ಸಿಸ್ ಅವರು ಪೆನಾಲ್ಟಿ ಸ್ಪಾಟ್‌ನ ಮೇಲೆ ಮಲಗಿ ಪ್ರತಿಭಟಿಸಿದರು. ಅಂತಿಮವಾಗಿ ಪೆನಾಲ್ಟಿ ಕಿಕ್‌ಗೆ ಅವಕಾಶ ನೀಡಿದರು.
‘‘ನಮ್ಮ ಪಾಲಿಗೆ ಇದೊಂದು ಕ್ರೂರ ಸೋಲು. ನಾವು 2-0 ಮುನ್ನಡೆಯಲ್ಲಿದ್ದೆವು. ಆದರೆ ಫುಟ್ಬಾಲ್ ಪಂದ್ಯವು 85 ನಿಮಿಷಗಳಲ್ಲಿ ಮುಗಿಯುವುದಿಲ್ಲ. ಬೆಲ್ಜಿಯಂ ತಂಡ ಮರಳಿ ಹೋರಾಟ ನೀಡಿತು. ನಮಗೆ ಅವರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.ಬೆಲ್ಜಿಯಂ ತಂಡ ಆಡಿದ ರೀತಿಗೆ ನಾವು ಅದನ್ನು ಅಭಿನಂದಿಸಬೇಕು’’ಎಂದು ಸೆನೆಗಲ್ ಕೋಚ್ ಪಾಪ್ ಥೀವ್ ಹೇಳಿದ್ದಾರೆ.
ಬೆಲ್ಜಿಯಂ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿದ್ದು ಹೇಗೆ?
ಸೆನೆಗಲ್ ವಿರುದ್ಧ ಗುರುವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ 32ರ ಸುತ್ತಿನ ಪಂದ್ಯದ ಹೆಚ್ಚುವರಿ ಸಮಯದ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಏರಿಯಾ ಸಮೀಪ ಬೆಲ್ಜಿಯಂ ನಾಯಕ ಯೂರಿ ಟೈಲ್‌ಮನ್ಸ್‌ರನ್ನು ಕೆಳಗೆ ಬೀಳಿಸಿದ ಕಾರಣಕ್ಕೆ ರೆಡ್‌ಡೆವಿಲ್ಸ್ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು.
ಮಿಡ್ ಫೀಲ್ಡರ್ ಯೂರಿ 117ನೇ ನಿಮಿಷದಲ್ಲಿ ಎಡ ಬದಿಯಿಂದ ಕ್ರಾಸ್‌ನತ್ತ ಚಲಿಸುತ್ತಿದ್ದಾಗ ಸೆನೆಗಲ್ ಆಟಗಾರ ಲ್ಯಾಮಿನ್ ಕ್ಯಾಮರಾ ಅವರು ಹಿಂದಿನಿಂದ ಯೂರಿ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿದರು.
ಆರಂಭದಲ್ಲಿ ರೆಫರಿ ಇವಾನ್ ಬಾರ್ಟನ್ ಪಂದ್ಯ ಮುಂದುವರಿಸುವಂತೆ ಸೂಚಿಸಿದರು. ಆದರೆ ವಿಎಆರ್ ಪರಿಶೀಲನೆಯ ನಂತರ ತನ್ನ ನಿರ್ಧಾರವನ್ನು ರದ್ದುಪಡಿಸಿದರು. ಬೆಲ್ಜಿಯಂ ತಂಡಕ್ಕೆ ಪೆನಾಲ್ಟಿ ಅವಕಾಶ ನೀಡಿದರು.
ಸೆನೆಗಲ್ ತಂಡದ ಪ್ರತಿಭಟನೆಗೆ ವಿಚಲಿತರಾಗದ ಯೂರಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಬ್ರೆಝಿಲ್‌ಗೆ ರೋಚಕ ಜಯ ತಂದುಕೊಟ್ಟರು.