ಇಂಡಿಯಾ ಓಪನ್ ನಲ್ಲಿ ಶುಚಿತ್ವರಹಿತ ವಾತಾವರಣ: ಡ್ಯಾನಿಶ್ ಬ್ಯಾಡ್ಮಿಂಟನ್ ಪಟು ಆರೋಪ
ಬ್ಯಾಡ್ಮಿಂಟನ್ ಫೆಡರೇಶನ್ ಪ್ರತಿಕ್ರಿಯಿಸಿದ್ದು ಹೀಗೆ..
ಮಿಯಾ ಬ್ಲಿಚ್‌ಫೆಲ್ಡ್ (Photo source: PTI)
ಹೊಸದಿಲ್ಲಿ: ಹೊಸ ದಿಲ್ಲಿಯಲ್ಲಿ ಆಯೋಜನೆಗೊಂಡಿರುವ ಇಂಡಿಯಾ ಓಪನ್ ಕ್ರೀಡಾಕೂಟದಲ್ಲಿ ಶುಚಿತ್ವ ರಹಿತ ವಾತಾವರಣವಿದೆ ಎಂದು ವಿಶ್ವದ ನಂ. 20 ಶ್ರೇಯಾಂಕದ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಪಟು ಮಿಯಾ ಬ್ಲಿಚ್‌ಫೆಲ್ಡ್ ಆರೋಪಿಸಿದ್ದಾರೆ.
ಆದರೆ ಮಿಯಾ ಬ್ಲಿಚ್‌ಫೆಲ್ಡ್ ಅವರ ಆರೋಪವನ್ನು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ಅಲ್ಲಗಳೆದಿದೆ. ಅವರ ಹೇಳಿಕೆಯು ಸಾಮಾನ್ಯ ಆಟದ ವಾತಾವರಣಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತು, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 750 ಕ್ರೀಡಾಕೂಟದ ಮೈದಾನವಾದ ಇಂದಿರಾ ಗಾಂಧಿ ಬಹೂಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ವಿವಾದದ ಕುರಿತು ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿರುವ ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ, “ಆಕೆಯ ಹೇಳಿಕೆ ನಿರ್ದಿಷ್ಟವಾಗಿ ಆಟದ ಮೈದಾನದ ಕುರಿತಲ್ಲ. ಬದಲಿಗೆ, ತರಬೇತಿ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಡಿ.ಜಾಧವ್ ಕ್ರೀಡಾಂಗಣದ ಕುರಿತಾಗಿದೆ. ಆಕೆಯ ಹೇಳಿಕೆ ಮುಖ್ಯ ಕ್ರೀಡಾಂಗಣದ ಕುರಿತಾದದ್ದಲ್ಲ” ಎಂದು ಹೇಳಿದ್ದಾರೆ.
2026ರ ಇಂಡಿಯಾ ಓಪನ್ ಕ್ರೀಡಾಕೂಟದ ಮುಖ್ಯ ಪಂದ್ಯ ಮಂಗಳವಾರ ಪ್ರಾರಂಭಗೊಂಡಿತು. ಇದರ ಬೆನ್ನಿಗೇ, “ಆಗಸ್ಟ್ ತಿಂಗಳಲ್ಲಿ ವಿಶ್ವ ಚಾಂಪಿಯನ್ ಶಿಪ್ಸ್ ಅನ್ನು ಆಯೋಜಿಸುವುದಕ್ಕೂ ಮುನ್ನ, ಈ ಕ್ರೀಡಾಂಗಣದ ಕುರಿತು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ಪರಾಮರ್ಶೆ ನಡೆಸಬೇಕು” ಎಂದು ಮಿಯಾ ಬ್ಲಿಚ್ ಫೆಲ್ಡ್ ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಮುಂಬರುವ ವಿಶ್ವ ಚಾಂಪಿಯನ್ ಶಿಪ್ಸ್ ಪಂದ್ಯಗಳೂ ಕೂಡಾ ಇದೇ ಕ್ರೀಡಾಂಗಣದಲ್ಲಿ ನಡೆಯಲಿವೆ.