ಡೈಮಂಡ್ ಲೀಗ್: 90 ಮೀಟರ್ ಗಡಿ ದಾಟಿದರೂ ನೀರಜ್ ಚೋಪ್ರಾಗೆ ನಿರಾಸೆ!
PC: x.com/diOnline04
ದೋಹಾ: ದೋಹಾ ಡೈಮಂಡ್ ಲೀಗ್ ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ 90.23 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ. 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆತ ಪ್ರಪ್ರಥಮ ಭಾರತೀಯ ಅಥ್ಲೀಟ್ ಎಂಬ ದಾಖಲೆಗೆ ಚೋಪ್ರಾ ಪಾತ್ರರಾಗಿದ್ದಾರೆ. ಸ್ಟಾಕ್ ಹೋಂ ಡೈಮಂಡ್ ಲೀಗ್-2022ರಲ್ಲಿ 89.94 ಮೀಟರ್ ದೂರಕ್ಕೆ ಜಾವೆಲಿನ್ ಎಸೆದದ್ದು ಅವರ ಜೀವನಶ್ರೇಷ್ಠ ಸಾಧನೆಯಾಗಿತ್ತು.
ಶುಕ್ರವಾರ ದೋಹಾ ಡೈಮಂಡ್ ಲೀಗ್ ನ ಮೂರನೇ ಪ್ರಯತ್ನದಲ್ಲಿ ಚೋಪ್ರಾ 90.23 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಈ ಐತಿಹಾಸಿಕ ಸಾಧನೆ ಮಾಡಿದರು. ಆದರೆ ಜರ್ಮನಿಯ ಜ್ಯೂಲಿಯನ್ ವೆಬೆರ್ 91.06 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡರು.
ಒಲಿಂಪಿಕ್ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ಚೋಪ್ರಾ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದರು. ಈ ಮೂಲಕ ದೋಹಾ ಡೈಮಂಡ್ ಲೀಗ್ ಕೂಟದಲ್ಲಿ ಎರಡನೇ ಸ್ಥಾನ ಪಡೆದರು.
ತಮ್ಮ ಮೂರನೇ ಪ್ರಯತ್ನದಲ್ಲಿ 90.23 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರಕ್ಕೆ ಕಾರಣರಾದರು ಹಾಗೂ ಕೂಟದಲ್ಲಿ ಮುನ್ನಡೆ ಸಾಧಿಸಿದರು. ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್ 90 ಮೀಟರ್ ಗಡಿ ದಾಟಿರುವುದು ಇದೇ ಮೊದಲು.
ಟೋಕಿಯೊ ಒಲಿಂಪಿಕ್ ಚಿನ್ನದ ಪದಕ, ಬುಡಾಪೆಸ್ಟ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು, ಡೈಮಂಡ್ ಲೀಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದರೂ, ನೀರಜ್ 90 ಮೀಟರ್ ಗಡಿ ದಾಟುತ್ತಾರೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.