Photo credit: PTI

ಬೆಂಗಳೂರು, ಆ.26: ಪಶ್ಚಿಮ ವಲಯ ತಂಡವನ್ನು 52 ರನ್ ಗಳ ಅಂತರದಿಂದ ಮಣಿಸಿರುವ ಉತ್ತರ ವಲಯ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್‌ ಗೆ ತಲುಪಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲ್ಲಲು 287 ರನ್ ಗಳ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡವು ಕೊನೆಯ ದಿನದಾಟವಾದ ಬುಧವಾರ 7 ವಿಕೆಟ್ ಗಳ ನಷ್ಟಕ್ಕೆ 220 ರನ್ನಿಂದ ಬ್ಯಾಟಿಂಗ್ ಮುಂದುವರಿಸಿತು. ಉರ್ವಿಲ್ ಪಟೇಲ್ ಔಟಾಗದೆ 25 ರನ್ ಗಳಿಸಿದ್ದರು. ಆದರೆ ಇಂದು ಕೇವಲ 14 ರನ್ ಗಳಿಸಿದ ಪಶ್ಚಿಮ ವಲಯ ತಂಡವು 57.3 ಓವರ್ಗಳಲ್ಲಿ 234 ರನ್ ಗಳಿಸಿ ಆಲೌಟಾಯಿತು.

ಲೆಗ್ ಸ್ಪಿನ್ನರ್ ಆಬಿದ್ ಮುಷ್ತಾಕ್ (4-60) ಅವರು ತನುಷ್ ಕೋಟ್ಯಾನ್ ಹಾಗೂ ತುಷಾರ್ ದೇಶಪಾಂಡೆ (5 ರನ್) ಅವರ ವಿಕೆಟ್ ಗಳನ್ನು ಉರುಳಿಸಿದರು.

ಪಂದ್ಯದಲ್ಲಿ ಮುಷ್ತಾಕ್ ಎರಡನೇ ಬಾರಿ ಐದು ವಿಕೆಟ್ ಗಳ ಗೊಂಚಲು ಪಡೆಯುವ ಹಾದಿಯಲ್ಲಿದ್ದರು. ಆದರೆ ಇನ್ನೋರ್ವ ಎಡಗೈ ಸ್ಪಿನ್ನರ್ ನಿಶಾಂತ್ ಸಿಂಧು ಅವರು ಉರ್ವಿಲ್ ಪಟೇಲ್ ಅವರ ವಿಕೆಟ್ ಉರುಳಿಸಿ ಪಶ್ಚಿಮ ವಲಯದ ಪ್ರತಿರೋಧವನ್ನು ಹತ್ತಿಕ್ಕಿದರು.

ಪಂದ್ಯದಲ್ಲಿ 99 ರನ್ಗೆ 9 ವಿಕೆಟ್ ಗಳನ್ನು ಪಡೆದಿರುವ ಮುಷ್ತಾಕ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಶ್ಚಿಮ ವಲಯದ ನಾಯಕ ಋತುರಾಜ್ ಗಾಯಕ್ವಾಡ್ ಮೂರನೇ ದಿನವಾದ ಮಂಗಳವಾರ 70 ಎಸೆತಗಳಲ್ಲಿ 66 ರನ್ ಗಳಿಸಿ ರನೌಟಾದಾಗ ಪಂದ್ಯವು ಉತ್ತರ ವಲಯದತ್ತ ವಾಲಿತು. ಗಾಯಕ್ವಾಡ್ ಅವರು ಮುಶೀರ್ ಖಾನ್ (96 ರನ್) ಅವರೊಂದಿಗೆ 111 ರನ್ ಗಳ ಜೊತೆಯಾಟ ನಡೆಸಿದ್ದರು.

ಒಂದು ಹಂತದಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 195 ರನ್ ಗಳಿಸಿದ್ದ ಪಶ್ಚಿಮ ವಲಯ ರನ್ ಚೇಸ್ ನಲ್ಲಿ ಹಿಡಿತ ಸಾಧಿಸಿದಂತೆ ಕಂಡುಬಂತು. ಆದರೆ ಕೇವಲ 25 ರನ್ ಗಳಿಸುವಷ್ಟರಲ್ಲಿ ಏಳು ಓವರ್ಗಳೊಳಗೆ ಗಾಯಕ್ವಾಡ್ ಹಾಗೂ ಮುಶೀರ್ ಖಾನ್ ಸಹಿತ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

ಪಶ್ಚಿಮ ವಲಯ ತಂಡಕ್ಕೆ ಕೊನೆಯ ಹಾಗೂ ನಾಲ್ಕನೇ ದಿನವಾದ ಬುಧವಾರ ಗೆಲ್ಲಲು ಮೂರು ವಿಕೆಟ್ ಗಳಿಂದ 67 ರನ್ ಗಳಿಸಬೇಕಾಗಿತ್ತು. ಆದರೆ ಎಡಗೈ ಸ್ಪಿನ್ನರ್ ಗಳಾದ ಮುಷ್ತಾಕ್ ಹಾಗೂ ನಿಶಾಂತ್ ಪಶ್ಚಿಮ ವಲಯಕ್ಕೆ ಗೆಲುವು ನಿರಾಕರಿಸಿದರು.

ಉತ್ತರ ವಲಯ ತಂಡವು ಇದೀಗ ಸೆಮಿ ಫೈನಲ್ನಲ್ಲಿ ದಕ್ಷಿಣ ವಲಯವನ್ನು ಎದುರಿಸಲಿದೆ. ಪೂರ್ವ ವಲಯವು ಕೇಂದ್ರ ವಲಯ ತಂಡವನ್ನು ಮುಖಾಮುಖಿಯಾಗಲಿದೆ. ಈ ಎರಡು ಸೆಮಿ ಫೈನಲ್ ಪಂದ್ಯಗಳು ಬೆಂಗಳೂರಿನ ಸಿಒಇ ಮೈದಾನದಲ್ಲಿ ಆಗಸ್ಟ್ 30ರಿಂದ ಆರಂಭವಾಗಲಿವೆ.

►ಸಂಕ್ಷಿಪ್ತ ಸ್ಕೋರ್

ಉತ್ತರ ವಲಯ: 251 ಹಾಗೂ 222 ರನ್

ಪಶ್ಚಿಮ ವಲಯ: 187 ಹಾಗೂ 234 ರನ್ಗೆ ಆಲೌಟ್

(ಮುಶೀರ್ ಖಾನ್ 96, ಋತುರಾಜ್ ಗಾಯಕ್ವಾಡ್ 66, ಆಬಿದ್ ಮುಷ್ತಾಕ್ 4/60)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor