2026ರ ಏಶ್ಯನ್ ಗೇಮ್ಸ್‌ನ ಭಾರತದ ಟೆನಿಸ್ ತಂಡದಲ್ಲಿ ಬದಲಾವಣೆ : ಕ್ರೀಡಾ ಸಚಿವಾಲಯದ ವಿರುದ್ಧ ರೋಹನ್ ಬೋಪಣ್ಣ ಆಕ್ರೋಶ
ರೋಹನ್ ಬೋಪಣ್ಣ | Photo Credit : PTI
ಹೊಸದಿಲ್ಲಿ: ಮುಂಬರುವ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಟೆನಿಸ್ ತಂಡದಲ್ಲಿ ಮಾಡಿರುವ ಬದಲಾವಣೆಗಳನ್ನು ಎರಡು ಬಾರಿಯ ಏಶ್ಯನ್ ಗೇಮ್ಸ್ ಚಾಂಪಿಯನ್ ರೋಹನ್ ಬೋಪಣ್ಣ ಪ್ರಶ್ನಿಸಿದ್ದಾರೆ.
ಆಯ್ಕೆ ಪ್ರಕ್ರಿಯೆ ಬದಲಾದ ನಂತರ ರ್ಯಾಂಕಿಂಗ್‌ಗಳ ಮೂಲಕ ಸ್ಥಾನ ಪಡೆದಿದ್ದ ಆಟಗಾರರನ್ನು ಹೊರಗಿಡಲಾಗಿದೆ. ರ್ಯಾಂಕಿಂಗ್‌ಗಳು ಇರುವುದು ಏಕೆ? ಎಂದು ಬೋಪಣ್ಣ ಕೇಳಿದ್ದಾರೆ.
ಕ್ರೀಡಾ ಸಚಿವಾಲಯದ ಮಾರ್ಗದರ್ಶಿಯ ಪ್ರಕಾರ, ಏಶ್ಯದ ಟಾಪ್-8ರಲ್ಲಿರುವ ಆಟಗಾರರು ಮಾತ್ರ ಏಶ್ಯನ್ ಗೇಮ್ಸ್‌ನ ಟೆನಿಸ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇದರಿಂದಾಗಿ ಮಾನಸ್ ಧಾಮ್ನೆ, ವೈಷ್ಣವಿ ಅಡ್ಕರ್, ಸಹಜಾ ಯಮಲಪಲ್ಲಿ, ವೈದೇಹಿ ಚೌಧರಿ ಹಾಗೂ ಪ್ರಾರ್ಥನಾ ಥೋಂಬಾರೆ ಆಯ್ಕೆಯಿಂದ ಹೊರಗುಳಿದಿದ್ದಾರೆ.
ಕ್ರೀಡಾ ಸಚಿವಾಲಯದ ನಿಯಮವನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಿದ ನಂತರ ಏಶ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದ ಐವರು ಆಟಗಾರ್ತಿಯರು ಇದರಿಂದ ಬಾಧಿತರಾಗಿದ್ದಾರೆ.
ಈ ನಿರ್ಧಾರವು ರ್ಯಾಂಕಿಂಗ್‌ನ ಮೌಲ್ಯ ಹಾಗೂ ಅರ್ಹತೆಯ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ ಎಂದಿರುವ ರೋಹನ್ ಬೋಪಣ್ಣ, ಭಾರತದ ಮಹಿಳೆಯರ ಸಿಂಗಲ್ಸ್‌ನ ನಂ.1 ಹಾಗೂ ನಂ.2ನೇ ಆಟಗಾರ್ತಿಯರ ಸಹಿತ ಐವರು ಆಟಗಾರ್ತಿಯರು ಕಷ್ಟಪಟ್ಟು ತಮ್ಮ ರ್ಯಾಂಕಿಂಗ್ಸ್ ಪಡೆದಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದೀಗ ಸಮಿತಿಯು ಆಟ ಆರಂಭವಾಗುವ ಮೊದಲೇ ಪೇಪರ್‌ನಲ್ಲಿ ಆಟಗಾರರ ಹಣೆಬರಹ ನಿರ್ಧರಿಸಿದೆ. ಎಲ್ಲವನ್ನೂ ಮೊದಲೇ ನಿರ್ಧರಿಸಿದ್ದರೆ, ಅರ್ಹತೆ ಹಾಗೂ ರ್ಯಾಂಕಿಂಗ್‌ನ ಅಗತ್ಯವೇನಿದೆ? ಈ ನಿರ್ಧಾರವು ಆಟಗಾರರಿಗೆ ಮಾತ್ರವಲ್ಲ ಅವರಿಗೆ ವೃತ್ತಿಜೀವನದಲ್ಲಿ ಬೆಂಬಲಿಸಿದ ಹೆತ್ತವರು ಹಾಗೂ ಪ್ರಾಯೋಜಕರ ಮೇಲೂ ಪರಿಣಾಮಬೀರುತ್ತದೆ’’ ಎಂದು ಬೆಟ್ಟು ಮಾಡಿದರು.
2026ರ ಆವೃತ್ತಿಯ ಏಶ್ಯನ್ ಗೇಮ್ಸ್ ಸೆಪ್ಟಂಬರ್ 19ರಂದು ಜಪಾನ್‌ನಲ್ಲಿ ಆರಂಭವಾಗಲಿದೆ.