ಮೈದಾನದಲ್ಲಿ ಮಾತಿನ ಚಕಮಕಿ | ಯಶಸ್ವಿ ಜೈಸ್ವಾಲ್, ಅಸಿತಾ ಫೆರ್ನಾಂಡೊಗೆ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ
ಯಶಸ್ವಿ ಜೈಸ್ವಾಲ್ | Photo Credit : PTI
ಹೊಸದಿಲ್ಲಿ: ಕೊಲಂಬೊದಲ್ಲಿ ದ್ವಿತೀಯ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದ ಭಾರತ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಶ್ರೀಲಂಕಾದ ವೇಗದ ಬೌಲರ್ ಅಸಿಥಾ ಫೆರ್ನಾಂಡೊಗೆ ಅವರ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಇಬ್ಬರೂ ಆಟಗಾರರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಸೋಮವಾರ ತಿಳಿಸಿದೆ.
ಫೆರ್ನಾಂಡೊ ಅವರು ಜೈಸ್ವಾಲ್‌ರನ್ನು 45 ರನ್‌ಗೆ ಔಟ್ ಮಾಡಿದ ನಂತರ ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಶ್ರೀಲಂಕಾದ ವೇಗದ ಬೌಲರ್ ಫೆರ್ನಾಂಡೊ ಪೆವಿಲಿಯನ್‌ಗೆ ವಾಪಸಾಗುತ್ತಿದ್ದ ಜೈಸ್ವಾಲ್‌ರನ್ನು ಅಣಕಿಸಿದರು. ಇದರಿಂದ ಕೆರಳಿದ ಜೈಸ್ವಾಲ್ ಮಾತಿನ ಚಕಮಕಿ ನಡೆಸಿದರು. ಇಬ್ಬರೂ ಆಟಗಾರರ ನಡುವೆ ಜಗಳ ಹೆಚ್ಚಾದಾಗ ಶ್ರೀಲಂಕಾದ ನಾಯಕ ಧನಂಜಯ ಡಿಸಿಲ್ವ ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಿದರು.