×
Ad

ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್

15 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ತೆರೆ; ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಭಾವನಾತ್ಮಕ ಘೋಷಣೆ

Update: 2026-06-28 20:40 IST

ಬೆನ್ ಸ್ಟೋಕ್ಸ್  | Photo Credit : PTI 

ನಾಟಿಂಗ್‌ಹ್ಯಾಮ್, ಜೂ. 28: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಬೆನ್ ಸ್ಟೋಕ್ಸ್ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ಟ್ರೆಂಟ್ ಬ್ರಿಡ್ಜ್‌ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಅವರು ತಮ್ಮ 15 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.

35 ವರ್ಷದ ಸ್ಟೋಕ್ಸ್ ಅವರು ಇಂಗ್ಲೆಂಡ್ ಪರ ಆಡಿದ ಅತ್ಯಂತ ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಸ್ಪೆಲ್‌ ನ ಮಧ್ಯದಲ್ಲಿದ್ದಾಗಲೇ ಅವರ ನಿವೃತ್ತಿ ಕುರಿತ ಅಧಿಕೃತ ಹೇಳಿಕೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಬಿಡುಗಡೆ ಮಾಡಿತು.

ವಿಶೇಷವೆಂದರೆ, ನಿವೃತ್ತಿ ಘೋಷಣೆ ಬಹಿರಂಗವಾದ ಕೆಲವೇ ಕ್ಷಣಗಳಲ್ಲಿ ಸ್ಟೋಕ್ಸ್ ವಿಕೆಟ್ ಪಡೆಯುವ ಮೂಲಕ ತಮ್ಮ ಅದ್ಭುತ ವೃತ್ತಿಜೀವನದ ಮತ್ತೊಂದು ಸ್ಮರಣೀಯ ಕ್ಷಣವನ್ನು ನಿರ್ಮಿಸಿದರು. ಜ್ಯಾಕ್ ಫೌಲ್ಕ್ಸ್ ನೀಡಿದ ಕ್ಯಾಚ್ ಅನ್ನು ಎರಡನೇ ಸ್ಲಿಪ್‌ ನಲ್ಲಿ ಉಪನಾಯಕ ಹ್ಯಾರಿ ಬ್ರೂಕ್ ಪಡೆದರು.

ಇತ್ತೀಚೆಗೆ ಲಂಡನ್‌ ನ ನೈಟ್‌ಕ್ಲಬ್‌ನಲ್ಲಿ ನಡೆದ ಘಟನೆಯೊಂದರ ಕಾರಣದಿಂದ ಇಂಗ್ಲೆಂಡ್‌ ನ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸ್ಟೋಕ್ಸ್, ನಾಟಿಂಗ್‌ಹ್ಯಾಮ್‌ ನಲ್ಲಿ ನಡೆದ ಮೂರನೇ ಟೆಸ್ಟ್‌ಗೆ ತಂಡವನ್ನು ಮುನ್ನಡೆಸಲು ಮರಳಿದ್ದರು. ಪಂದ್ಯದ ನಾಲ್ಕನೇ ದಿನದಾಟ ಆರಂಭವಾಗುವ ಮುನ್ನವೇ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ತಂಡದ ಸಹ ಆಟಗಾರರಿಗೆ ತಿಳಿಸಿದ್ದರು.

ತಂಡದ ಡ್ರೆಸ್ಸಿಂಗ್ ರೂಮ್‌ ನಲ್ಲಿ ಭಾವುಕರಾಗಿ ಮಾತನಾಡಿದ ಸ್ಟೋಕ್ಸ್, "ಈ ತಂಡಕ್ಕಾಗಿ, ನಿಮ್ಮೆಲ್ಲರಿಗಾಗಿ ಮತ್ತು ದೇಶಕ್ಕಾಗಿ ನಾನು ಅನೇಕ ಪ್ರವಾಸಗಳನ್ನು ಮಾಡಿದ್ದೇನೆ. ಇನ್ನೂ ಒಂದು ಕೊನೆಯ ಪ್ರಯಾಣ ಬಾಕಿಯಿದೆ. ನಾವು ಫಲಿತಾಂಶವನ್ನು ಲೆಕ್ಕಿಸದೆ, ಕಳೆದ ಎರಡು ದಿನಗಳಲ್ಲಿ ಸಾಧ್ಯವಾದ ಎಲ್ಲವನ್ನೂ ನೀಡಿದ್ದೇವೆ ಎಂಬ ಭಾವನೆಯೊಂದಿಗೆ ಮೈದಾನದಿಂದ ಹೊರಬರಬೇಕು. ನಾನು ಬಯಸುವುದೂ ಅದನ್ನೇ," ಎಂದು ಹೇಳಿದರು.

ನ್ಯೂಝಿಲೆಂಡ್ ತಂಡವು 300ಕ್ಕೂ ಅಧಿಕ ರನ್‌ ಗಳ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಸ್ಟೋಕ್ಸ್ ಈ ಆಘಾತಕಾರಿ ನಿರ್ಧಾರವನ್ನು ಪ್ರಕಟಿಸಿದರು. ಈ ಸುದ್ದಿ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಕ್ಷಣಾರ್ಧದಲ್ಲಿ ಹರಡಿತು.

2019ರ ವಿಶ್ವಕಪ್ ಮತ್ತು ಹೆಡಿಂಗ್ಲಿ ಇನ್ನಿಂಗ್ಸ್ ಅಮರ

ಸ್ಟೋಕ್ಸ್ ಅವರ ವೃತ್ತಿಜೀವನ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಅತ್ಯಂತ ಸ್ಮರಣೀಯ ಅಧ್ಯಾಯಗಳಲ್ಲಿ ಒಂದಾಗಿದೆ. 2019ರ ವಿಶ್ವಕಪ್ ಫೈನಲ್‌ ನಲ್ಲಿ ಅವರು ಗಳಿಸಿದ ಅಮೂಲ್ಯ 84 ರನ್‌ ಗಳು ಇಂಗ್ಲೆಂಡ್ ತಂಡಕ್ಕೆ ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ತಂದುಕೊಟ್ಟಿದ್ದವು. ನ್ಯೂಝಿಲೆಂಡ್ ವಿರುದ್ಧದ ಆ ಪಂದ್ಯವನ್ನು ಕ್ರಿಕೆಟ್ ಇತಿಹಾಸದ ಶ್ರೇಷ್ಠ ಪಂದ್ಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಅದೇ ವರ್ಷದ ಆಗಸ್ಟ್‌ ನಲ್ಲಿ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 135 ರನ್ ಗಳಿಸುವ ಮೂಲಕ ಅವರು ಇಂಗ್ಲೆಂಡ್‌ ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಈ ಸಾಧನೆಗಳಿಗಾಗಿ ಅವರಿಗೆ ಬಿಬಿಸಿ ವರ್ಷದ ಕ್ರೀಡಾ ವ್ಯಕ್ತಿತ್ವ ಪ್ರಶಸ್ತಿಯೂ ಲಭಿಸಿತ್ತು.

ದಾಖಲೆಗಳಿಂದ ಕೂಡಿದ ವೃತ್ತಿಜೀವನ

ಡರ್ಹ್ಯಾಮ್ ಮೂಲದ ಸ್ಟೋಕ್ಸ್ ಇಂಗ್ಲೆಂಡ್ ಪರ ಒಟ್ಟು 122 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 44 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಅವರು 114 ಏಕದಿನ ಅಂತರರಾಷ್ಟ್ರೀಯ ಮತ್ತು 43 ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ದೇಶವನ್ನು ಪ್ರತಿನಿಧಿಸಿದ್ದರು. 2022ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೋಕ್ಸ್ 7,243 ರನ್ ಗಳಿಸಿದ್ದು, 251 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 7,000ಕ್ಕೂ ಹೆಚ್ಚು ರನ್ ಮತ್ತು 250ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಸಾಧನೆಯನ್ನು ಈ ಹಿಂದೆ ವೆಸ್ಟ್ ಇಂಡೀಸ್‌ನ ಸರ್ ಗಾರ್ಫೀಲ್ಡ್ ಸೋಬರ್ಸ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ ಮಾತ್ರ ಸಾಧಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿರುವ 136 ಸಿಕ್ಸರ್‌ಗಳೂ ದಾಖಲೆಯಾಗಿದೆ.

'ಬಾಝ್ ಬಾಲ್' ಯುಗದ ನಾಯಕ

2022ರಲ್ಲಿ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡ ಸ್ಟೋಕ್ಸ್, ಆಕ್ರಮಣಕಾರಿ ಹಾಗೂ ನಿರ್ಭೀತ ಕ್ರಿಕೆಟ್‌ಗೆ ಉತ್ತೇಜನ ನೀಡುವ 'ಬಾಝ್ ಬಾಲ್' ಶೈಲಿಯನ್ನು ಪರಿಚಯಿಸಿದರು. ಹಿಂದಿನ 17 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದ ಇಂಗ್ಲೆಂಡ್ ತಂಡವು, ಸ್ಟೋಕ್ಸ್-ಮೆಕಲಮ್ ಜೋಡಿಯ ನೇತೃತ್ವದಲ್ಲಿ ಮೊದಲ 11 ಟೆಸ್ಟ್ ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿತು.

ನಾಯಕನಾಗಿ ಸ್ಟೋಕ್ಸ್ ಸುಮಾರು ಶೇ 56ರಷ್ಟು ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, ಕಳೆದ 45 ವರ್ಷಗಳಲ್ಲಿ ಇಂಗ್ಲೆಂಡ್ ನಾಯಕನೊಬ್ಬನ ಅತ್ಯುತ್ತಮ ಯಶಸ್ಸಿನ ಪ್ರಮಾಣವಾಗಿದೆ. ಆದರೆ, 2023ರ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2-2 ಡ್ರಾ ಮತ್ತು ನಂತರ ಭಾರತ ಪ್ರವಾಸದಲ್ಲಿ 4-1 ಅಂತರದ ಸೋಲು ತಂಡಕ್ಕೆ ಹಿನ್ನಡೆಯಾಯಿತು.

ಭಾರತ ಪ್ರವಾಸದ ಬಳಿಕ ಸ್ಟೋಕ್ಸ್ ಮತ್ತು ಮೆಕಲಮ್ ಹೊಸ ಇಂಗ್ಲೆಂಡ್ ತಂಡವನ್ನು ನಿರ್ಮಿಸುವ ಪ್ರಕ್ರಿಯೆಗೆ ಮುಂದಾದರು. ಈ ಅವಧಿಯಲ್ಲಿ ದಾಖಲೆಯ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ನಿವೃತ್ತಿಗೆ ಒತ್ತಾಯಿಸುವ ನಿರ್ಧಾರವನ್ನೂ ಕೈಗೊಂಡಿದ್ದರು. 2025ರಲ್ಲಿ ಭಾರತವನ್ನು ತವರಿನಲ್ಲಿ ಸೋಲಿಸುವುದು ಹಾಗೂ ಆಸ್ಟ್ರೇಲಿಯಾದಲ್ಲಿ ಆಶಸ್ ಸರಣಿಯನ್ನು ಮರಳಿ ಗೆಲ್ಲುವುದು ಅವರ ಗುರಿಯಾಗಿತ್ತು. ಆದರೆ ಭಾರತ ವಿರುದ್ಧದ ಸರಣಿ 2-2ರಲ್ಲಿ ಸಮಬಲಗೊಂಡಿದ್ದು, ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್ 4-1 ಅಂತರದ ಸೋಲು ಅನುಭವಿಸಿತು.

ಗಾಯಗಳು ಮತ್ತು ವಿವಾದಗಳ ನಡುವಿನ ಹೋರಾಟ

ಸ್ಟೋಕ್ಸ್ ಅವರ ವೃತ್ತಿಜೀವನ ಹಲವು ಗಾಯಗಳು ಮತ್ತು ಮೈದಾನದ ಹೊರಗಿನ ವಿವಾದಗಳಿಂದಲೂ ಗಮನ ಸೆಳೆದಿದೆ. 2017ರಲ್ಲಿ ಬ್ರಿಸ್ಟಲ್‌ನ ನೈಟ್‌ಕ್ಲಬ್ ಹೊರಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಅವರು 2017-18ರ ಆಶಸ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ನಂತರ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು.

2021ರಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಅವರು ಕ್ರಿಕೆಟ್‌ ನಿಂದ ವಿರಾಮ ಪಡೆದಿದ್ದರು. ನಂತರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ತಮ್ಮ ತಂದೆ ಗೆಡ್ ಅವರ ನಿಧನ ಮತ್ತು ಬ್ರಿಸ್ಟಲ್ ಘಟನೆಯ ಪರಿಣಾಮಗಳ ಬಗ್ಗೆ ಅವರು ಮಾತನಾಡಿದ್ದರು.

2023 ಮತ್ತು 2024ರಲ್ಲಿ ಎಡ ಮೊಣಕಾಲಿನ ಗಂಭೀರ ಗಾಯಗಳು ಅವರ ಬೌಲಿಂಗ್‌ ಗೆ ಅಡ್ಡಿಯುಂಟುಮಾಡಿದ್ದವು. ಈ ಬೇಸಿಗೆಯಲ್ಲಿ ಡರ್ಹ್ಯಾಮ್ ಅಕಾಡೆಮಿಯಲ್ಲಿ ತರಬೇತಿ ನೀಡುವ ವೇಳೆ ಚೆಂಡು ತಗುಲಿ ಕೆನ್ನೆ ಮೂಳೆ ಮುರಿದಿದ್ದರೂ, ಅವರು ಮತ್ತೆ ತಂಡಕ್ಕೆ ಮರಳಿದ್ದರು.

ಇತ್ತೀಚೆಗೆ ಲಂಡನ್‌ ನ ನೈಟ್‌ಕ್ಲಬ್ ಘಟನೆಯ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಟೋಕ್ಸ್, ಮೂರನೇ ಟೆಸ್ಟ್‌ಗೆ ಮರಳುವ ಮೊದಲು ತಮ್ಮ ಸಹ ಆಟಗಾರರ ಬಳಿ ಕ್ಷಮೆಯಾಚಿಸಿದ್ದರು.

"ನಾನು ಇಂಗ್ಲೆಂಡ್ ಪರ ಆಡುವುದನ್ನು ಮತ್ತು ಈ ತಂಡದ ನಾಯಕನಾಗಿರುವುದನ್ನು ಅತ್ಯಂತ ಪ್ರೀತಿಸುತ್ತೇನೆ. ನಾಯಕತ್ವದಿಂದ ಹಿಂದೆ ಸರಿದು ಆಟಗಾರನಾಗಿ ಮುಂದುವರಿಯುವುದನ್ನು ನಾನು ಎಂದಾದರೂ ಕಲ್ಪಿಸಿಕೊಂಡಿದ್ದೇನೆಯೇ ಎಂಬ ಪ್ರಶ್ನೆಗೆ ನನಗೆ ಸ್ಪಷ್ಟ ಉತ್ತರವೇ ಇಲ್ಲ," ಎಂದು ಸ್ಟೋಕ್ಸ್ ಇತ್ತೀಚೆಗೆ ಹೇಳಿದ್ದರು.

ಸ್ಟೋಕ್ಸ್ ಅವರ ನಿವೃತ್ತಿಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ಪ್ರಭಾವಿ ಮತ್ತು ಸ್ಮರಣೀಯ ಯುಗವೊಂದಕ್ಕೆ ತೆರೆ ಬಿದ್ದಂತಾಗಿದೆ. ಆಗಸ್ಟ್‌ನಲ್ಲಿ ಹೆಡಿಂಗ್ಲಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಮುಂದಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದ್ದು, ಉಪನಾಯಕ ಹ್ಯಾರಿ ಬ್ರೂಕ್ ಪ್ರಮುಖ ಆಕಾಂಕ್ಷಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News