ವಿಶ್ವ ರೋಯಿಂಗ್ ಕಪ್ ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ; ಲಕ್ಷಯ್–ಉಜ್ವಲ್ ಜೋಡಿಯಿಂದ ಐತಿಹಾಸಿಕ ಸಾಧನೆ
Photo Credit : NDTV
ಲ್ಯುಸೆರ್ನ್ (ಸ್ವಿಟ್ಜರ್‌ಲ್ಯಾಂಡ್): ವಿಶ್ವ ರೋಯಿಂಗ್ ಕಪ್-3 ಟೂರ್ನಿಯಲ್ಲಿ ಭಾರತದ ಲಕ್ಷಯ್ ಮತ್ತು ಉಜ್ವಲ್ ಕುಮಾರ್ ಸಿಂಗ್ ಜೋಡಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ವಿಶ್ವ ರೋಯಿಂಗ್ ಕಪ್ ನಲ್ಲಿ ಭಾರತ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು.
ಶನಿವಾರ ನಡೆದ ಪುರುಷರ ಡಬಲ್ ಸ್ಕಲ್ಸ್ ವಿಭಾಗದ ಫೈನಲ್ ನಲ್ಲಿ ಭಾರತೀಯ ಜೋಡಿ 6 ನಿಮಿಷ 26.09 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದುಕೊಂಡಿತು. ಹಾಂಕಾಂಗ್ ತಂಡವು 6 ನಿಮಿಷ 27.14 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ನೆದರ್ಲೆಂಡ್ಸ್ ತಂಡವು 6 ನಿಮಿಷ 27.36 ಸೆಕೆಂಡ್‌ಗಳೊಂದಿಗೆ ಕಂಚಿನ ಪದಕ ಗೆದ್ದಿತು.
ವಿಶ್ವ ರೋಯಿಂಗ್ ಕಪ್ ವಿಶ್ವ ರೋಯಿಂಗ್ ಚಾಂಪಿಯನ್‌ಷಿಪ್‌ಗೆ ಪೂರ್ವಭಾವಿಯಾಗಿ ನಡೆಯುವ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾಗಿದೆ. ವಿಶ್ವದ ಅಗ್ರ ಒಲಿಂಪಿಕ್ ಮತ್ತು ಅಂತರರಾಷ್ಟ್ರೀಯ ಮಟ್ಟದ ರೋಯಿಂಗ್ ಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.
ಚಿನ್ನದ ಪದಕ ಗೆದ್ದ ಹವೀಲ್ದಾರ್ ಉಜ್ವಲ್ ಕುಮಾರ್ ಸಿಂಗ್ ಮತ್ತು ಹವೀಲ್ದಾರ್ ಲಕ್ಷಯ್ ಇಬ್ಬರೂ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲ 18 ಮಂದಿ ರೋಯಿಂಗ್ ಪಟುಗಳೂ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ 17 ಮಂದಿ ಭೂಸೇನೆಯಲ್ಲಿದ್ದು, ಒಬ್ಬರು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.