ಒಂದು ರನ್ ನಿಂದ ಭಾರತಕ್ಕೆ ಸೋಲು; 2-0 ಅಂತರದಲ್ಲಿ T20 ಸರಣಿ ಗೆದ್ದ ಐರ್ಲೆಂಡ್
Photo credit : x.com/ICC
ಬೆಲ್‌ಫಾಸ್ಟ್, ಜೂ.28: ತಿಲಕ್ ವರ್ಮಾ ಅವರ ಅರ್ಧಶತಕದ ಹೋರಾಟದ ನಡುವೆಯೂ ಭಾರತ ತಂಡವು ಎರಡನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಒಂದು ರನ್‌ನಿಂದ ಸೋಲು ಅನುಭವಿಸಿತು. ಇದರೊಂದಿಗೆ ಆತಿಥೇಯ ಐರ್ಲೆಂಡ್ ತಂಡವು ಎರಡು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಐತಿಹಾಸಿಕ ಸಾಧನೆ ಮಾಡಿತು.
ಇಲ್ಲಿನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಐರ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಭಾರತದ ಪರ ಪ್ರಿನ್ಸ್ ಯಾದವ್ 22 ರನ್ ನೀಡಿ ಮೂರು ವಿಕೆಟ್ ಕಬಳಿಸಿ ಗಮನ ಸೆಳೆದರು.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡವು ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿ 46 ಎಸೆತಗಳಲ್ಲಿ 55 ರನ್ ಗಳಿಸಿದರು. ಆದರೆ, ಅವರಿಗೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ.
ಐರ್ಲೆಂಡ್ ಪರ ಜೈ ಮೂಂದ್ರಾ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿ 32 ರನ್ ನೀಡಿ ಮೂರು ವಿಕೆಟ್ ಪಡೆದರು. ಪರಿಣಾಮ, ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಎಸೆತದಲ್ಲಿ ಭಾರತಕ್ಕೆ ಗೆಲುವಿಗೆ ಎಂಟು ರನ್‌ಗಳ ಅಗತ್ಯವಿತ್ತು. ಈ ವೇಳೆ ಪ್ರಿನ್ಸ್ ಯಾದವ್ ಸಿಕ್ಸರ್ ಬಾರಿಸಿದರೂ, ಭಾರತ ತಂಡ ಒಂದು ರನ್‌ನಿಂದ ಸೋಲು ಅನುಭವಿಸಿತು.
ಮೊದಲ ಟಿ20 ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದ ಐರ್ಲೆಂಡ್ ತಂಡವು, ಭಾರತ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತು.