ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ | ಭಾರತದ ಪ್ಯಾರಾ-ಅತ್ಲೀಟ್ ಅನ್ಮೋಲ್ ವಶಿಷ್ಟಗೆ 3 ವರ್ಷ ನಿಷೇಧ
ಅನ್ಮೋಲ್ ವಶಿಷ್ಟ | Photo Credit : X
ಹೊಸದಿಲ್ಲಿ: ಅಂತರ್ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಐಪಿಸಿ)ಭಾರತದ ಅನ್ಮೋಲ್ ವಶಿಷ್ಟಗೆ ಮೂರು ವರ್ಷಗಳ ಕಾಲ ನಿಷೇಧ ಹೇರಿದೆ.
ಈ ವರ್ಷದ ಮಾರ್ಚ್ನಲ್ಲಿ ಹೊಸದಿಲ್ಲಿ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಗ್ರ್ಯಾನ್ಪ್ರಿ ವೇಳೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಅನ್ಮೋಲ್ ನಿಷೇಧಿತ ಉದ್ದೀಪನ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.
ಪುರುಷರ ಜಾವೆಲಿನ್ ಥ್ರೋ ಎಫ್55 ಸ್ಪರ್ಧೆಯ ಸಂದರ್ಭ ಅನ್ಮೋಲ್ರಿಂದ ಮೂತ್ರ ಮಾದರಿಯನ್ನು ಸಂಗ್ರಹಿಸಲಾಗಿತ್ತು.
ಪ್ರಕರಣದ ತನಿಖೆ ನಡೆಯುತ್ತಿದ್ದಾಗಲೇ ಅನ್ಮೋಲ್ರನ್ನು ಎಪ್ರಿಲ್ 24ರಂದು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಯಿತು. ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ ನಡೆದಿರುವುದನ್ನು ಒಪ್ಪಿಕೊಂಡಿರುವ ಅನ್ಮೋಲ್ ಐಪಿಸಿ ಪ್ರಸ್ತಾವಿಸಿದ ಶಿಕ್ಷೆಯನ್ನು ಸ್ವೀಕರಿಸಿದರು.
ಅನ್ಮೋಲ್ ಅವರ ಮೂರು ವರ್ಷಗಳ ಅನರ್ಹತೆಯ ಅವಧಿಯು 2026ರ ಎಪ್ರಿಲ್ 24ರಿಂದ 2029ರ ಎಪ್ರಿಲ್ 23ರ ತನಕ ಇರುತ್ತದೆ. ಈ ಅವಧಿಯಲ್ಲಿ ಡೋಪಿಂಗ್ ವಿರೋಧಿ ಶಿಕ್ಷಣ ಅಥವಾ ಪುನರ್ವಸತಿ ಕಾರ್ಯಕ್ರಮಗಳಂತಹ ಅಧಿಕೃತ ಚಟುವಟಿಕೆಗಳನ್ನು ಹೊರತುಪಡಿಸಿ ಯಾವುದೇ ಕ್ರೀಡಾ ಸ್ಪರ್ಧೆಗಳಲ್ಲಿ ಅಥವಾ ಇತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ ಹೊಂದಿರುವುದಿಲ್ಲ.
ಹೊಸದಿಲ್ಲಿ ಗ್ರ್ಯಾನ್ಪ್ರಿನಲ್ಲಿ ಪುರುಷರ ಜಾವೆಲಿನ್ ಥ್ರೋ(ಎಫ್55 ವಿಭಾಗ)ಸ್ಪರ್ಧೆಯಲ್ಲಿ ವಶಿಷ್ಠ ಅವರು ಪಡೆದ ಫಲಿತಾಂಶಗಳನ್ನು ಹಾಗೂ ಆ ಸ್ಪರ್ಧೆಯಲ್ಲಿ ಅವರು ಗಳಿಸಿದ ಇತರ ಎಲ್ಲ ಫಲಿತಾಂಶಗಳನ್ನು ಐಪಿಸಿ ರದ್ದುಗೊಳಿಸಿದೆ. ಈ ಸ್ಪರ್ಧೆಯಲ್ಲಿ ಅವರು ಗೆದ್ದುಕೊಂಡ ಯಾವುದೇ ಪದಕಗಳು, ಅಂಕಗಳು ಹಾಗೂ ಬಹುಮಾನಗಳನ್ನು ಅವರು ಕಳೆದುಕೊಳ್ಳಲಿದ್ದಾರೆ.