ಏಕದಿನ ಕಪ್ | ವೇಗದ ಅರ್ಧಶತಕ ಗಳಿಸಿದ ಆಸ್ಟ್ರೇಲಿಯದ ಬ್ಯಾಟರ್ ಮೆಕ್ಗರ್ಕ್
ಜೇಕ್ ಫ್ರೇಸರ್ ಮೆಕ್ಗರ್ಕ್ | Photo Credit : X
ಅಡಿಲೇಡ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಬ್ಯಾಟರ್ ಜೇಕ್ ಫ್ರೇಸರ್ ಮೆಕ್ಗರ್ಕ್ ಏಕದಿನ ಕಪ್ ಟೂರ್ನಿಯ ಇತಿಹಾಸದಲ್ಲಿ ವೇಗದ ಅರ್ಧಶತಕ ಗಳಿಸಿದರು. ಈ ಮೂಲಕ ಶನಿವಾರ ಕ್ವೀನ್ಸ್ಲ್ಯಾಂಡ್ಸ್ ವಿರುದ್ಧ ದಕ್ಷಿಣ ಆಸ್ಟ್ರೇಲಿಯ ತಂಡವು 7 ವಿಕೆಟ್ಗಳ ನಷ್ಟಕ್ಕೆ 397 ರನ್ ಗಳಿಸುವಲ್ಲಿ ನೆರವಾದರು.
24ರ ವಯಸ್ಸಿನ ಮೆಕ್ಗರ್ಕ್ ಕೇವಲ 14 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು. ಇದರೊಂದಿಗೆ ಟೂರ್ನಮೆಂಟ್ನಲ್ಲಿ ತನ್ನದೇ ದಾಖಲೆಯನ್ನು ಮುರಿದರು. ಮೆಕ್ಗರ್ಕ್ ಅಂತಿಮವಾಗಿ 63 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್ಗಳ ಸಹಿತ 122 ರನ್ ಗಳಿಸಿ ದಕ್ಷಿಣ ಆಸ್ಟ್ರೇಲಿಯ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಮೆಕ್ಗರ್ಕ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ನಾಲ್ಕನೇ ಜಂಟಿ ವೇಗದ ಅರ್ಧಶತಕ ಗಳಿಸಿದರು. ಭಾರತದ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ವೇಗದ ಅರ್ಧಶತಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಮೆಕ್ಗರ್ಕ್ಗೆ ದಕ್ಷಿಣ ಆಸ್ಟ್ರೇಲಿಯದ ನಾಯಕ ನಾಥನ್ ಮೆಕ್ಸ್ವೀನಿ 103 ಎಸೆತಗಳಲ್ಲಿ ತನ್ನ ಮೂರನೇ ಲಿಸ್ಟ್ ಎ ಶತಕ(106 ರನ್)ಗಳಿಸಿ ಸಾಥ್ ನೀಡಿದರು. ಈ ಇಬ್ಬರ ಪ್ರಯತ್ನದಿಂದ ಆತಿಥೇಯ ತಂಡವು 50 ಓವರ್ಗಳಲ್ಲಿ ದೊಡ್ಡ ಮೊತ್ತ ಕಲೆ ಹಾಕಿತು.
ಮೆಕ್ಗರ್ಕ್ ಇನಿಂಗ್ಸ್ ಮೇಲೆ ಹಿಡಿತ ಸಾಧಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಟಾಮ್ ಸ್ಟ್ರೇಕರ್ಸ್ ಅವರ ಎರಡನೇ ಓವರ್ನಲ್ಲಿ 22 ರನ್ ಗಳಿಸಿದರು. ಆರನೇ ಓವರ್ನಲ್ಲಿ ಹೇಡನ್ ಕೆರ್ರ್ ಎಸೆತದಲ್ಲಿ ಬೌಂಡರಿ ಗಳಿಸಿ ಅರ್ಧಶತಕ ಗಳಿಸಿದರು. ಕೇವಲ 22 ಎಸೆತಗಳಲ್ಲಿ 75 ರನ್ ಗಳಿಸಿದ್ದಾರೆ. ವಿಟ್ನಿ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ ಮೆಕ್ಗರ್ಕ್ ಕೇವಲ 49 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಮೆಕ್ಗರ್ಕ್ ಅವರ ವಿಸ್ಫೋಟಕ ಇನಿಂಗ್ಸ್ 21ನೇ ಓವರ್ನಲ್ಲಿ ಕೊನೆಗೊಂಡಿತು. ಹೇಡನ್ ಕೆರ್ರ್ ಅವರು ಮೆಕ್ಗರ್ಕ್ ಇನಿಂಗ್ಸ್ಗೆ ತೆರೆ ಎಳೆದರು.