ಮುಂಬೈ ಇಂಡಿಯನ್ಸ್ ನಂಟು ಕಡಿದುಕೊಂಡ ಮಹೇಲ ಜಯವರ್ಧನೆ
ಮಹೇಲ ಜಯವರ್ಧನೆ | Photo Credit : PTI
ಮುಂಬೈ: ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ತರಬೇತುದಾರರಾಗಿದ್ದ ಮಹೇಲ ಜಯ ವರ್ಧನೆ ಅವರ ಕೋಚಿಂಗ್ ಅವಧಿಯು ಕೊನೆಗೊಂಡಿದೆ ಎಂದು ಫ್ರಾಂಚೈಸಿ ಶನಿವಾರ ಪ್ರಕಟಿಸಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು 2026ರ ಆವೃತ್ತಿಯ ಐಪಿಎಲ್ನಲ್ಲಿ 9ನೇ ಸ್ಥಾನ ಪಡೆದಿತ್ತು. 2017ರಿಂದ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಒಡನಾಟ ಹೊಂದಿದ್ದ ಜಯವರ್ಧನೆಯ ನಿರ್ಗಮನವು ಬಹುತೇಕ ನಿರೀಕ್ಷಿತವೇ ಆಗಿತ್ತು.
ಜಯವರ್ಧನೆ 2017ರಲ್ಲಿ ಮೊದಲ ಬಾರಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಮುಂಬೈ ತಂಡವು 2017, 2019 ಹಾಗೂ 2020ರಲ್ಲಿ ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದರು. 2022ರಲ್ಲಿ ಕೋಚ್ ಹುದ್ದೆಯನ್ನು ತೊರೆದ ಜಯವರ್ಧನೆ, ಫ್ರಾಂಚೈಸಿಯ ಕಾರ್ಯಕ್ಷಮತೆಯ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 2025ರ ಋತುವಿನಲ್ಲಿ ಎರಡನೇ ಬಾರಿ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡಿದ್ದರು.
‘‘ಮಹೇಲ ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಶಾಂತ ನಾಯಕತ್ವ, ಪ್ರಾಮಾಣಿಕತೆ ಹಾಗೂ ಆಟದ ಮೇಲಿನ ಅಪಾರ ಪ್ರೀತಿ ನಮಗೆ ಬಹಳ ಮುಖ್ಯವಾಗಿವೆ. ಮಹೇಲ ಯಾವಾಗಲೂ ನಮ್ಮ ಕುಟುಂಬದ ಭಾಗವಾಗಿರುತ್ತಾರೆ. ಅವರ ಮುಂದಿನ ಪಯಣದಲ್ಲಿ ಅವರಿಗೆ ಅಪಾರ ಸಂತೋಷ ಹಾಗೂ ಯಶಸ್ಸು ಸಿಗಲಿ’’ ಎಂದು ಹಾರೈಸುವುದಾಗಿ ಫ್ರಾಂಚೈಸಿಯ ಮಾಲಕಿ ನೀತಾ ಅಂಬಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ಗೆ ಜಯವರ್ಧನೆ ಅವರ ಕೊಡುಗೆ ಐಪಿಎಲ್ನ ಆಚೆಗೂ ವಿಸ್ತರಿಸಿದೆ. ಕಾರ್ಯಕ್ಷಮತೆಯ ಜಾಗತಿಕ ಮುಖ್ಯಸ್ಥರಾಗಿದ್ದಾಗ ಅವರು ಫ್ರಾಂಚೈಸಿಯ ವಿದೇಶಿ ಲೀಗ್ಗಳ ವಿಸ್ತರಣೆಯ ಮೇಲ್ವಿಚಾರಣೆ ಮಾಡಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ, ಎಂಐ ನ್ಯೂಯಾರ್ಕ್ ಹಾಗೂ ಎಂಐ ಎಮಿರೇಟ್ಸ್ ಫ್ರಾಂಚೈಸಿಗಳು ತಲಾ ಒಂದು ಪ್ರಶಸ್ತಿಯನ್ನು ಗೆದ್ದಿದ್ದವು.