ವಿಶ್ವಜಿತ್ ಮೋರೆ | Photo Credit : X

ಲಾಸ್ ವೇಗಾಸ್: ಅಂಡರ್-23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 55 ಕೆಜಿ ಗ್ರೀಕೊ-ರೋಮನ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿರುವ ವಿಶ್ವಜಿತ್ ಮೋರೆ ಇತಿಹಾಸ ನಿರ್ಮಿಸಿದ್ದಾರೆ.

ಮೋರೆ ಈ ಹಿಂದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕಗಳನ್ನು ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಏಕೈಕ ಗ್ರೀಕೊ-ರೋಮನ್ ಕುಸ್ತಿಪಟು ಎನಿಸಿಕೊಂಡಿದ್ದರು. ಮೋರೆ ಇದೀಗ ಗ್ರೀಕೊ-ರೋಮನ್ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಕುಸ್ತಿಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಗುರುವಾರ ಚಿನ್ನದ ಪದಕಕ್ಕಾಗಿ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಜಿಯಾದ ಕೊಬಾ ಕಾರುಮಿಡ್ಝ್ ವಿರುದ್ಧ ತೀವ್ರ ಹೋರಾಟ ನೀಡಿದ ಮೋರೆ 12-13 ಅಲ್ಪ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಭಾರತೀಯ ಕುಸ್ತಿಪಟು ಮೋರೆ ಫೈನಲ್‌ಗೆ ತಲುಪುವ ಮುನ್ನ ಮೂರು ಪಂದ್ಯಗಳನ್ನು ಜಯಿಸಿದ್ದರು.

ಮೆಕ್ಸಿಕೊದ ಐಸಾಕ್ ಮರಿನ್ ಮಾಟಾರನ್ನು 10-8 ಅಂತರದಿಂದ ಮಣಿಸಿ ತನ್ನ ಅಭಿಯಾನ ಆರಂಭಿಸಿದ್ದ ಮೋರೆ, ಕ್ವಾರ್ಟರ್ ಫೈನಲ್‌ನಲ್ಲಿ ಇರಾನಿನ ಅಂಡರ್-20 ವಿಶ್ವ ಚಾಂಪಿಯನ್ ಅರ್ಮಿನ್ ಶಮ್ಸಿಪೊರ್‌ರನ್ನು 8-1ರಿಂದ ಸೋಲಿಸಿದ್ದರು. ಸೆಮಿ ಫೈನಲ್‌ನಲ್ಲಿ ರಶ್ಯದ ಮಲಿಕ್ ಗಿಗೀವ್‌ರನ್ನು 6-4 ಅಂತರದಿಂದ ಸೋಲಿಸಿದ್ದರು.

ವಿಶ್ವಜಿತ್ ಮೋರೆ, ಅಂಡರ್-23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಗ್ರೀಕೊ-ರೋಮನ್ ಕುಸ್ತಿಪಟುವಾಗಬೇಕೆಂಬ ಗುರಿ ಇಟ್ಟುಕೊಂಡಿದ್ದರು. ಆದರೆ ಫೈನಲ್‌ನಲ್ಲಿ ಎಡವಿದರು.

ಮಹಿಳೆಯರ ಸ್ಪರ್ಧೆಯಲ್ಲಿ ಕೋಮಲ್ ಹಾಗೂ ದೀಕ್ಷಾ ಮಲಿಕ್ ಕಂಚಿನ ಪದಕದ ಪಂದ್ಯಗಳಲ್ಲಿ ಆಡಲಿದ್ದಾರೆ.

ಭಾರತದ ಇತರ ಗ್ರೀಕೊ-ರೋಮನ್ ಕುಸ್ತಿಪಟುಗಳು ಪದಕ ಸುತ್ತಿಗೆ ತಲುಪುವಲ್ಲಿ ವಿಫಲವಾದರು. ಚೇತನ್(63ಕೆಜಿ)ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋತರೆ, ಕರಣ್ ಕಾಂಬೋಜ್(87ಕೆಜಿ)ಅರ್ಹತಾ ಸುತ್ತಿನಲ್ಲಿ ಸೋತಿದ್ದರು.

ಭಾರತದ ಅಭಿಯಾನಕ್ಕೆ ಹೊಡೆತ ನೀಡಿದ ವೀಸಾ ನಿರಾಕರಣೆ:

ಗ್ರೀಕೊ-ರೋಮನ್ ಹಾಗೂ ಮಹಿಳೆಯರ ವಿಭಾಗಗಳಲ್ಲಿ 9 ಕುಸ್ತಿಪಟುಗಳಿಗೆ ಅಮೆರಿಕದ ವೀಸಾಗಳನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತದ ಒಟ್ಟು ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದೆ. 20ಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಪೂರ್ಣಾವಧಿ ಉದ್ಯೋಗವನ್ನು ಹೊಂದಿಲ್ಲ ಎಂಬ ಕಾರಣ ನೀಡಿ ಕುಸ್ತಿಪಟುಗಳಿಗೆ ಅಮೆರಿಕದ ವೀಸಾಗಳನ್ನು ತಿರಸ್ಕರಿಸಲಾಗಿತ್ತು.

ಭಾರತದ ಕುಸ್ತಿ ಒಕ್ಕೂಟದ(ಡಬ್ಲ್ಯುಎಫ್‌ಐ)ಮುಖ್ಯಸ್ಥ ಸಂಜಯ್ ಸಿಂಗ್ ಅಮೆರಿಕದ ರಾಯಭಾರಿ ಕಚೇರಿಯ ನಿರ್ಧಾರವನ್ನು ಟೀಕಿಸಿದ್ದು, ಇದು ಭಾರತದ ಪದಕದ ಅವಕಾಶಗಳ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ.

‘‘ನಿರುದ್ಯೋಗಿಗಳು ಎಂಬ ನೆಲೆಯಲ್ಲಿ ಅಮೆರಿಕದ ರಾಯಭಾರಿ ಕಚೇರಿಯು ಭಾರತದ 9 ಕುಸ್ತಿಪಟುಗಳ ವೀಸಾಗಳನ್ನು ತಿರಸ್ಕರಿಸಿದೆ. ಇತಿಹಾಸದಲ್ಲಿ ಮೊದಲ ಸಲ ಹೀಗಾಗಿದೆ. ವೀಸಾ ನಿರಾಕರಣೆಯು ಅಮೆರಿಕದ ರಾಯಭಾರಿ ಕಚೇರಿಯ ತಪ್ಪಾಗಿದೆ. ಇದರ ಪರಿಣಾಮದಿಂದ ಭಾರತವು ಹಲವು ಪದಕಗಳನ್ನು ಕಳೆದುಕೊಂಡಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor