×
Ad

FIFA 2026 | ಮೆಸ್ಸಿ ಅವರ ಫಿಫಾ ವಿಶ್ವಕಪ್ ಗೋಲುಗಳ ಸರಣಿ ಅಂತ್ಯ

Update: 2026-07-12 20:42 IST

ಲಿಯೊನೆಲ್ ಮೆಸ್ಸಿ  | Photo Credit : PTI 

ಕಾನ್ಸಾಸ್ ಸಿಟಿ, ಜು.12: ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸತತ 10ನೇ ಗೋಲು ಗಳಿಸುವಲ್ಲಿ ವಿಫಲರಾದರು. ಈ ಮೂಲಕ ಅವರ ಗೋಲುಗಳ ಸರಣಿಯು 9ಕ್ಕೆ ಅಂತ್ಯವಾಗಿದೆ. ಸ್ವಿಟ್ಸರ್‌ಲ್ಯಾಂಡ್ ವಿರುದ್ಧ ರವಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಯಕ ಮೆಸ್ಸಿ ಗೋಲು ಗಳಿಸದೆ ಇದ್ದರೂ ಅರ್ಜೆಂಟೀನ ತಂಡವು ಹೆಚ್ಚುವರಿ ಸಮಯದಲ್ಲಿ 3-1 ಅಂತರದಿಂದ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮೆಸ್ಸಿ ಅವರ ಸತತ 9 ಗೋಲುಗಳ ಸರಣಿ ಅಂತ್ಯವಾಗಿದೆ. ಆದರೆ, ಅವರು ಹಾಲಿ ಚಾಂಪಿಯನ್ ತಂಡವು 10ನೇ ನಿಮಿಷದಲ್ಲಿ ಆರಂಭಿಕ ಗೋಲು ಗಳಿಸಲು ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್‌ಗೆ ಅಸಿಸ್ಟ್ ಮಾಡಿದರು.

ಈ ಪಂದ್ಯ ಆರಂಭಕ್ಕೆ ಮೊದಲು ಮೆಸ್ಸಿಯನ್ನು ತಡೆಯಲು ತಂಡ ರೂಪಿಸಿರುವ ಯೋಜನೆಯ ಕುರಿತು ಸ್ವಿಸ್ ಕೋಚ್ ಮುರಾಟ್ ಯಾಕಿನ್ ಅವರನ್ನು ಕೇಳಿದಾಗ, ಇದೊಂದು ಅಚ್ಚರಿಯ ಪ್ರಶ್ನೆ. ನಮ್ಮಲ್ಲಿ ಹಲವು ಪರಿಹಾರಗಳಿವೆ. ಅದರಲ್ಲಿ ಉತ್ತಮ ಪರಿಹಾರ ಕಂಡುಕೊಳ್ಳುತ್ತೇವೆ. ನಾವು ಈ ಕುರಿತು ಸಾಕಷ್ಟು ಚರ್ಚಿಸಿದ್ದೇವೆ. ಮೈದಾನದಲ್ಲಿ ನಮ್ಮ ಯೋಜನೆ ಜಾರಿಗೆ ತರಲಿದ್ದೇವೆ’’ ಎಂದಿದ್ದರು.

ಸ್ವಿಸ್ ತಂಡವು ಮೆಸ್ಸಿ ಅವರನ್ನು ಗೋಲು ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರೂ ತನ್ನ ಪಾಸ್ಸಿಂಗ್ ಹಾಗೂ ಕ್ರಿಯೇಟಿವಿಟಿಯಿಂದ ಪಂದ್ಯದ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ಮೆಸ್ಸಿ ಪ್ರಸಕ್ತ ವಿಶ್ವಕಪ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದು, ಒಟ್ಟು ಎಂಟು ಗೋಲಗಳನ್ನು ಗಳಿಸಿ ಅರ್ಜೆಂಟೀನವನ್ನು ಸೆಮಿ ಫೈನಲ್‌ಗೆ ತಲುಪಿಸಿದ್ದಾರೆ. ಮೆಸ್ಸಿ ಗೋಲಿನ ಸರಣಿ ಮುಂದುವರಿಸದೆ ಇದ್ದರೂ, ಮತ್ತೊಮ್ಮೆ ಗೋಲು ಗಳಿಸಲು ನೆರವಾಗಿ ಅರ್ಜೆಂಟೀನ ತಂಡವು ವಿಶ್ವಕಪ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸ ಹೆಚ್ಚಿಸಿದ್ದಾರೆ.

ಮತ್ತೊಂದು ಮೈಲಿಗಲ್ಲು ತಲುಪಿದ ಮೆಸ್ಸಿ

ಲಿಯೊನೆಲ್ ಮೆಸ್ಸಿ ತನ್ನ ಯಶಸ್ವಿ ಫಿಫಾ ವಿಶ್ವಕಪ್ ವೃತ್ತಿಜೀವನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. 1966ರ ನಂತರ ವಿಶ್ವಕಪ್ ಪಂದ್ಯಾವಳಿಯಲ್ಲಿ 10 ಅಸಿಸ್ಟ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.

ಸ್ವಿಟ್ಸರ್‌ಲ್ಯಾಂಡ್ ವಿರುದ್ಧ ರವಿವಾರ ನಡೆದ ವಿಶ್ವಕಪ್‌ನ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೆಸ್ಸಿ ಈ ಸಾಧನೆ ಮಾಡಿದರು. 10ನೇ ನಿಮಿಷದಲ್ಲಿ ಅಲೆಕ್ಸಿಸ್ ಅಲಿಸ್ಟರ್‌ಗೆ ಗೋಲು ಗಳಿಸಲು ಮೆಸ್ಸಿ ಅಸಿಸ್ಟ್ ಮಾಡಿದರು.

ಹಿಂದಿನ ಐದು ಪಂದ್ಯಗಳಲ್ಲಿ ಕೇವಲ ಮೂರು ಗೋಲುಗಳನ್ನು ಬಿಟ್ಟುಕೊಟ್ಟಿದ್ದ ಸ್ವಿಸ್ ತಂಡವು ಇದೇ ಮೊದಲ ಬಾರಿ ಟೂರ್ನಿಯ ಆರಂಭದಲ್ಲಿ 0-1 ಹಿನ್ನಡೆ ಕಂಡಿತು.

ಮತ್ತೊಮ್ಮೆ ಅಸಿಸ್ಟ್ ಮಾಡಿದ ಮೆಸ್ಸಿ, ವಿಶ್ವಕಪ್ ಇತಿಹಾಸದಲ್ಲಿ ಓರ್ವ ಶ್ರೇಷ್ಠ ಆಟಗಾರನೆಂಬ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಒಟ್ಟು 10 ಬಾರಿ ಅಸಿಸ್ಟ್ ಮಾಡಿರುವ ಅವರು ಸಾರ್ವಕಾಲಿಕ ಅಸಿಸ್ಟ್ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನದ ಲೆಜೆಂಡ್ ಡಿಯಾಗೊ ಮರಡೋನಾ(8 ಅಸಿಸ್ಟ್) ಅವರಿಗಿಂತ ಮೆಸ್ಸಿ ಮುಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News