FIFA 2026 | ವಿಶ್ವಕಪ್ ಫೈನಲ್‌ಗಿಂತ ಮೊದಲು ವಿಶೇಷ ಪ್ರಶಸ್ತಿ ಅನಾವರಣಗೊಳಿಸಿದ ಫಿಫಾ
ಫಿಫಾ ವಿಶ್ವಕಪ್ | Photo Credit : PTI
ನ್ಯೂಜೆರ್ಸಿ, ಜು.17: ಫಿಫಾ ವಿಶ್ವಕಪ್ ಟೂರ್ನಿಯ 96 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಚಾಂಪಿಯನ್‌ಗಳಿಗೆ ವಿಶೇಷ ಫಿಫಾ ವಿಶ್ವಕಪ್ ಚಾಂಪಿಯನ್‌ಶಿಪ್ ರಿಂಗ್‌ಗಳನ್ನು ನೀಡಲಾಗುವುದು. ವಿಜೇತ ತಂಡವು ಐಕಾನಿಕ್ ಟ್ರೋಫಿಯೊಂದಿಗೆ ರಿಂಗ್ ಅನ್ನು ಸ್ವೀಕರಿಸಲಿದೆ.
ಜುಲೈ 19ರ ರವಿವಾರದಂದು ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಸ್ಪೇನ್ ಹಾಗೂ ಅರ್ಜೆಂಟೀನ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ನಂತರ ವಿಜೇತ ತಂಡಕ್ಕೆ ಇದೇ ಮೊದಲ ಬಾರಿ ಉಂಗುರಗಳನ್ನು ಪ್ರದಾನಿಸಲಾಗುತ್ತದೆ.
ಚಾಂಪಿಯನ್‌ಶಿಪ್ ರಿಂಗ್‌ನ ಒಂದು ಬದಿಯು ಐಕಾನಿಕ್ ಫಿಫಾ ವಿಶ್ವಕಪ್ ಟ್ರೋಫಿಯ ಚಿತ್ರವನ್ನು ಹೊಂದಿದ್ದರೆ, ಇನ್ನೊಂದು ಬದಿಯು ವಿಜೇತ ರಾಷ್ಟ್ರದ ಗುರುತನ್ನು ಪ್ರತಿಬಿಂಬಿಸಲಿದೆ.
2,026 ಉಂಗುರಗಳ ಸೀಮಿತ ಆವೃತ್ತಿಯ ಸಂಗ್ರಹವನ್ನು ಕೂಡ ಫಿಫಾ ಅನಾವರಣಗೊಳಿಸಿದೆ. ಇದರಲ್ಲಿ 30 ಉಂಗುರಗಳು ವಿಶ್ವಕಪ್ ವಿಜೇತರಿಗೆ ಕಾಯ್ದಿರಿಸಲಾಗಿದೆ. ಉಳಿದ 1,996 ಉಂಗುರಗಳು ವಿಶ್ವದಾದ್ಯಂತ ಅಭಿಮಾನಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ.
ಫೈನಲ್ ಪಂದ್ಯ ಮುಗಿದ ನಂತರ ವಿಜೇತ ತಂಡದ ನಾಯಕ ಹಾಗೂ ಮುಖ್ಯ ತರಬೇತುದಾರರಿಗೆ ತಾತ್ಕಾಲಿಕ ಚಾಂಪಿಯನ್‌ಶಿಪ್ ಉಂಗುರಗಳನ್ನು ನೀಡಲಾಗುತ್ತದೆ. 30 ಉಂಗುರಗಳನ್ನು ನಂತರ ಪ್ರತ್ಯೇಕವಾಗಿ ಪ್ರದಾನಿಸಲಾಗುತ್ತದೆ.