ಸಿಕ್ಸರ್ ಗಳ ಸರದಾರ, ಶ್ರೇಷ್ಠ ಆಲ್‌ ರೌಂಡರ್, ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ನಿಧನ

Update: 2026-07-17 22:10 IST

Photo Credit : X \ @BCCI

ಬ್ರಿಡ್ಜ್ಟೌನ್: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಿಗ್ಗಜ ಹಾಗೂ ಸಾರ್ವಕಾಲಿಕ ಶ್ರೇಷ್ಠ ಆಲ್‌ ರೌಂಡರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಸರ್ ಗಾರ್ಫೀಲ್ಡ್ (ಗ್ಯಾರಿ) ಸೋಬರ್ಸ್ ಅವರು 89ನೇ ವಯಸ್ಸಿನಲ್ಲಿ ನಿಧನರಾದರು.

ಸೋಬರ್ಸ್ ಅವರು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್– ಮೂರೂ ವಿಭಾಗಗಳಲ್ಲಿ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿ ಕ್ರಿಕೆಟ್ ಇತಿಹಾಸದಲ್ಲೇ ವಿಶಿಷ್ಟ ಸ್ಥಾನ ಗಳಿಸಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ದಿವಂಗತ ರಿಚಿ ಬೆನಾಡ್, "ಜಗತ್ತು ಕಂಡ ಶ್ರೇಷ್ಠ ಆಲ್‌ ರೌಂಡ್ ಕ್ರಿಕೆಟಿಗ" ಎಂದು ಅವರನ್ನು ಬಣ್ಣಿಸಿದ್ದರು. "ಅವರು ಶ್ರೇಷ್ಠ ಬ್ಯಾಟರ್, ಅದ್ಭುತ ಫೀಲ್ಡರ್ ಹಾಗೂ ಹೊಸ ಚೆಂಡಿನ ವೇಗದ ಬೌಲಿಂಗ್‌ ನಿಂದ ಹಿಡಿದು ಸಾಂಪ್ರದಾಯಿಕ ಎಡಗೈ ಸ್ಪಿನ್ ಮತ್ತು ಓವರ್–ದಿ–ರಿಸ್ಟ್ ಸ್ಪಿನ್ ವರೆಗೆ ಸಮರ್ಥವಾಗಿ ಬೌಲಿಂಗ್ ಮಾಡುವ ಅಪರೂಪದ ಆಟಗಾರರಾಗಿದ್ದರು" ಎಂದು ಅವರು ಹೇಳಿದ್ದರು.

1953ರಲ್ಲಿ ಕೇವಲ 16ನೇ ವಯಸ್ಸಿನಲ್ಲಿ ಸೋಬರ್ಸ್ ಬಾರ್ಬಡೋಸ್ ಪರ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದರು. ಅಸಾಧಾರಣ ಪ್ರತಿಭೆಯಿಂದಾಗಿ ಮುಂದಿನ ವರ್ಷವೇ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿಟ್ಟರು.

1958ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕ ದಾಖಲಿಸಿದ ಅವರು ಅಜೇಯ 365 ರನ್ ಗಳಿಸಿದರು. ಆ ಇನ್ನಿಂಗ್ಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ನ ವಿಶ್ವದಾಖಲೆಯಾಗಿತ್ತು. 1994ರಲ್ಲಿ ಬ್ರಿಯಾನ್ ಲಾರಾ 375 ರನ್ ಗಳಿಸುವವರೆಗೆ ಈ ದಾಖಲೆ ಅಬಾಧಿತವಾಗಿಯೇ ಉಳಿದಿತ್ತು.

1968ರಲ್ಲಿ ವೇಲ್ಸ್ನ ಸ್ವಾನ್ಸಿಯ ಗ್ಲಾಮೋರ್ಗನ್ ನ ಸೇಂಟ್ ಹೆಲೆನ್ಸ್ ಮೈದಾನದಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ ಒಂದೇ ಓವರ್ ನ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಈ ಸಾಧನೆ ಕ್ರಿಕೆಟ್ ಇತಿಹಾಸದಲ್ಲಿ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.

1974ರಲ್ಲಿ 38ನೇ ವಯಸ್ಸಿನಲ್ಲೇ ಸೋಬರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದರು. ಅವರ ನಿವೃತ್ತಿಯ ಕುರಿತು 1975ರ ವಿಸ್ಡನ್ ವಾರ್ಷಿಕ ಸಂಚಿಕೆ, ಮಾನಸಿಕ ಮತ್ತು ದೈಹಿಕ ಆಯಾಸ, ಮೊಣಕಾಲಿನ ಗಾಯ ಹಾಗೂ ನಿರಂತರ ಕ್ರಿಕೆಟ್ ಮತ್ತು ವಿದೇಶ ಪ್ರವಾಸಗಳಿಂದಾಗಿ ಅವರು ಆಟದ ಮೇಲಿನ ಉತ್ಸಾಹ ಕಳೆದುಕೊಂಡಿದ್ದರು ಎಂದು ವಿಶ್ಲೇಷಿಸಿತ್ತು. ಬಹುಮುಖ ಪ್ರತಿಭೆಯ ಕಾರಣ ಅವರಿಗೆ ಇತರ ಆಟಗಾರರಿಗಿಂತ ಹೆಚ್ಚು ಜವಾಬ್ದಾರಿಗಳು ಮತ್ತು ಹೆಚ್ಚು ಕ್ರಿಕೆಟ್ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದೂ ಉಲ್ಲೇಖಿಸಿತ್ತು.

ಸೋಬರ್ಸ್ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 57.78ರ ಸರಾಸರಿಯಲ್ಲಿ 8,032 ರನ್ ಗಳಿಸಿದ್ದರು. 34.03ರ ಸರಾಸರಿಯಲ್ಲಿ 235 ವಿಕೆಟ್ ಪಡೆದಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 5,000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪೈಕಿ ನಾಲ್ಕನೇ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿದ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 383 ಪಂದ್ಯಗಳನ್ನು ಆಡಿದ ಅವರು 28,000ಕ್ಕೂ ಹೆಚ್ಚು ರನ್ ಗಳಿಸಿದ್ದು, 1,000ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಬಾರ್ಬಡೋಸ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಜೊತೆಗೆ ಆಸ್ಟ್ರೇಲಿಯಾದ ದಕ್ಷಿಣ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನ ನಾಟಿಂಗ್ಹ್ಯಾಮ್ ಶೈರ್ ಪರವೂ ಅವರು ಆಡಿದ್ದರು.

ಕ್ರಿಕೆಟ್‌ ಗೆ ನೀಡಿದ ಅಮೋಘ ಸೇವೆಯನ್ನು ಪರಿಗಣಿಸಿ 1975ರಲ್ಲಿ ಅವರಿಗೆ 'ನೈಟ್' ಗೌರವ ನೀಡಿ 'ಸರ್' ಬಿರುದು ನೀಡಲಾಯಿತು.

ಅವರ ಗೌರವಾರ್ಥ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ವರ್ಷದ ಶ್ರೇಷ್ಠ ಪುರುಷ ಕ್ರಿಕೆಟಿಗನಿಗೆ ನೀಡುವ ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಯನ್ನು 'ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ' ಎಂದು ಹೆಸರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News