Kolkatta | ದಿನಸಿ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ನಾಪತ್ತೆ
ಹೌರಾ ರೈಲು ನಿಲ್ದಾಣದಲ್ಲಿ ಕೊನೆಯದಾಗಿ ಸಿಸಿಟಿವಿಯಲ್ಲಿ ದೃಶ್ಯ ಸೆರೆ; ವ್ಯಾಪಕ ಹುಡುಕಾಟ
ದಮಯಂತಿ ಸೇನ್ | Photo Credit : NDTV
ಕೋಲ್ಕತ್ತಾ, ಜು. 17: ಪಶ್ಚಿಮ ಬಂಗಾಳದ ಹೌರಾದಲ್ಲಿರುವ ತನ್ನ ಮನೆಯಿಂದ ದಿನಸಿ ವಸ್ತುಗಳನ್ನು ಖರೀದಿಸಲು ಹೊರಟಿದ್ದ 15 ವರ್ಷದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.
ಕೇಂದ್ರ ಹೌರಾದ ಉಮಾಚರಣ್ ಭಟ್ಟಾಚಾರ್ಜಿ ಲೇನ್ ನಿವಾಸಿಯಾಗಿರುವ ದಮಯಂತಿ, ರಾಷ್ಟ್ರೀಯ ತಂಡದ ಆಯ್ಕೆ ಪ್ರಯೋಗಗಳಿಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಶೂಟಿಂಗ್ ವಲಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ಮನೆಗೆ ಅಗತ್ಯವಿದ್ದ ದಿನಸಿ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದ ದಮಯಂತಿ ಬಳಿಕ ಮನೆಗೆ ಹಿಂದಿರುಗಿಲ್ಲ. ಸ್ನೇಹಿತರು, ಶೂಟಿಂಗ್ ತಂಡದ ಸದಸ್ಯರು ಹಾಗೂ ಸಂಬಂಧಿಕರ ಬಳಿ ಕುಟುಂಬದವರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕೆ ಕಾಣೆಯಾಗಿರುವ ಕುರಿತು ದೂರು ದಾಖಲಿಸಲಾಗಿದೆ.
ಹೌರಾ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುರುವಾರ ದಮಯಂತಿ ಪ್ಲಾಟ್ಫಾರ್ಮ್ ಸಂಖ್ಯೆ 4 ಮತ್ತು 5ರ ನಡುವೆ ಸಂಚರಿಸುತ್ತಿರುವುದು ದಾಖಲಾಗಿದೆ. ಇದುವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಇದೇ ಆಕೆಯ ಕೊನೆಯ ದೃಢೀಕೃತ ದೃಶ್ಯವಾಗಿದೆ ಎಂದು ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದಮಯಂತಿಯ ಮುಂದಿನ ಚಲನವಲನವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಿಂದ ಹೊರಡುವಾಗ ಅವರ ಬಳಿ ಮೊಬೈಲ್ ಫೋನ್ ಕೂಡ ಇತ್ತು.
ರಾಷ್ಟ್ರೀಯ ಮಟ್ಟದ ಆಯ್ಕೆ ಪರೀಕ್ಷೆಗೆ ಆಯ್ಕೆಯಾದ ಬಳಿಕ ದಮಯಂತಿ ಕಟ್ಟುನಿಟ್ಟಿನ ದಿನಚರಿಯನ್ನು ಅನುಸರಿಸುತ್ತಿದ್ದರು ಎಂದು ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಕಲಹ ಉಂಟಾಗಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ದಮಯಂತಿಯ ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ನಲ್ಲಿ, "ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೌರಾ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 4 ಮತ್ತು 5ರ ನಡುವೆ ನನ್ನ ಮಗಳು ದಮಯಂತಿ ಸೇನ್ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ. ಆ ಬಳಿಕ ಆಕೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆ ಗುಲಾಬಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಹಾಗೂ ಹಾಫ್ ಪ್ಯಾಂಟ್ ಧರಿಸಿದ್ದಳು. ಯಾರಿಗಾದರೂ ಆಕೆಯ ಬಗ್ಗೆ ಮಾಹಿತಿ ದೊರೆತರೆ ಅಥವಾ ಆಕೆಯನ್ನು ಕಂಡರೆ ದಯವಿಟ್ಟು ತಕ್ಷಣ ಕೆಳಗೆ ನೀಡಿರುವ ಸಂಖ್ಯೆಗೆ ಸಂಪರ್ಕಿಸಿ" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆಯವರೆಗೂ ದಮಯಂತಿ ಪತ್ತೆಯಾಗಿಲ್ಲ. ಆಕೆಯ ಹಠಾತ್ ನಾಪತ್ತೆಯಿಂದ ಕುಟುಂಬದವರು, ನೆರೆಹೊರೆಯವರು ಹಾಗೂ ಸಹ ಶೂಟರ್ ಗಳಲ್ಲಿ ಆತಂಕ ವ್ಯಕ್ತವಾಗಿದೆ.
ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.