FIFA 2026 | ಸೆಮಿ ಫೈನಲ್ ಸ್ಥಾನಕ್ಕಾಗಿ ಸ್ಪೇನ್-ಬೆಲ್ಜಿಯಮ್ ಸೆಣಸಾಟ
Photo Credit : PTI
ಲಾಸ್ ಏಂಜಲೀಸ್, ಜು.9: ಸ್ಪೇನ್ ಹಾಗೂ ಬೆಲ್ಜಿಯಮ್ ತಂಡಗಳು ಭಾರತದ ಕಾಲಮಾನ ಶನಿವಾರ ಮುಂಜಾನೆ 12:30 ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ನಿರ್ಣಾಯಕ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿದ ಸ್ಪೇನ್ ತಂಡವು ಪೋರ್ಚುಗಲ್ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿತ್ತು. ಟೂರ್ನಿಯ ಅತಿದೊಡ್ಡ ಪಂದ್ಯದಲ್ಲಿ ಅಭಿಮಾನಿಗಳು ಶಿಸ್ತಿನ ಪ್ರದರ್ಶನಕ್ಕೆ ಸಾಕ್ಷಿಯಾದರು.
ತನ್ನ ಸೊಗಸಾದ ಫುಟ್ಬಾಲ್ ಹಾಗೂ ಆಕ್ರಮಣಕಾರಿ ಶೈಲಿಗೆ ಹೆಸರುವಾಸಿಯಾಗಿರುವ ಸ್ಪೇನ್ ತಂಡವು ರಕ್ಷಣಾ ವಿಭಾಗದಲ್ಲಿ ಎಲ್ಲರನ್ನು ಪ್ರಭಾವಿತಗೊಳಿಸಿದೆ. ಸ್ಪೇನ್ ತಂಡವು ಪ್ರಸಕ್ತ ವಿಶ್ವ್ವಕಪ್ ಟೂರ್ನಿಯಲ್ಲಿ ಈ ತನಕ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಸ್ಪೇನ್-ಬೆಲ್ಜಿಯಮ್ ತಂಡಗಳು ಮೂರನೇ ಬಾರಿ ಪರಸ್ಪರ ಮುಖಾಮುಖಿಯಾಗುತ್ತಿವೆ.
ಸ್ಪೇನ್ ತಂಡವು ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಕೇಪ್‌ವರ್ಡ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಮುಜುಗರ ಅನುಭವಿಸಿತ್ತು. ಆ ನಂತರ ಸೌದಿ ಅರೇಬಿಯಾ ಹಾಗೂ ಉರುಗ್ವೆ ತಂಡವನ್ನು ಮಣಿಸಿ ‘ಎಚ್’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. 32ರ ಸುತ್ತಿನ ಪಂದ್ಯದಲ್ಲಿ ಆಸ್ಟ್ರೀಯ ತಂಡವನ್ನು 3-0 ಅಂತರದಿಂದ ಮಣಿಸಿತ್ತು. ಮಿಕೆಲ್ ಮೆರಿನೊ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಅಂತಿಮ-16ರ ಪಂದ್ಯದಲ್ಲಿ ಪೋರ್ಚುಗಲ್‌ಗೆ ಸೋಲುಣಿಸಿತ್ತು.
ಸ್ಪೇನ್ ಪರ ಮಿಕೆಲ್ ಒಯರ್ಝಾಬಲ್ ಒಟ್ಟು ನಾಲ್ಕು ಗೋಲು ಗಳಿಸಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರ ಲಾಮಿನ್ ಯಮಲ್ ವಿಶ್ವಕಪ್‌ನಲ್ಲಿ ಮಂದಗತಿಯ ಆರಂಭ ಪಡೆದಿದ್ದು, ಕೇವಲ ಒಂದು ಗೋಲು ಗಳಿಸಿದ್ದಾರೆ.
ಬೆಲ್ಜಿಯಮ್ ತಂಡದ ಕ್ವಾರ್ಟರ್ ಫೈನಲ್ ಹಾದಿಯು ಮೈದಾನದ ಒಳಗೆ ಹಾಗೂ ಹೊರಗೆ ನಾಟಕೀಯ ತಿರುವಿನಿಂದ ಕೂಡಿದ್ದವು. ಫೋಲಾರಿನ್ ಬಾಲೋಗನ್ಸ್ ಅಮಾನತಿಗೆ ವಿಷಯಕ್ಕೆ ಸಂಬಂಧಿಸಿ ವಿವಾದ ಸುತ್ತುವರಿದಿದ್ದರೂ ಅಂತಿಮ-16ರ ಸುತ್ತಿನಲ್ಲಿ ಬೆಲ್ಜಿಯಮ್ ತಂಡವು ಅಮೆರಿಕ ತಂಡವನ್ನು 3-1 ಅಂತರದಿಂದ ಸೋಲಿಸಿತ್ತು. ಬಾಲೋಗನ್ ಮೇಲಿನ ನಿಷೇಧವನ್ನುಹಿಂಪಡೆದು ಬೆಲ್ಜಿಯಮ್ ವಿರುದ್ಧ ಆಡಲು ಅನುಮತಿ ನೀಡಿರುವ ಫಿಫಾದ ವಿರುದ್ಧ ಕಾನೂನು ಹೋರಾಟ ಮಾಡಲು ಬೆಲ್ಜಿಯಮ್ ಫುಟ್ಬಾಲ್ ಸಂಸ್ಥೆ ನಿರ್ಧರಿಸಿದೆ.
ಬೆಲ್ಜಿಯಮ್ ತಂಡವು ‘ಜಿ’ ಗುಂಪಿನಲ್ಲಿ ಈಜಿಪ್ಟ್ ಹಾಗೂ ಇರಾನ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಆರಂಭದಲ್ಲಿ ಪರದಾಟ ನಡೆಸಿತ್ತು. ನ್ಯೂಝಿಲ್ಯಾಂಡ್ ವಿರುದ್ಧ 5-1 ಅಂತರದಿಂದ ಜಯಶಾಲಿಯಾಗಿ ‘ಜಿ ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. ಸೆನೆಗಲ್ ವಿರುದ್ಧ ಎರಡು ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡು ಹೆಚ್ಚುವರಿ ಸಮಯದಲ್ಲಿ ಗೆಲುವಿನ ಗೋಲು ಗಳಿಸಿತ್ತು. ಅಮೆರಿಕದ ವಿರುದ್ಧ ಪ್ರಿ-ಕ್ವಾ.ಫೈನಲ್‌ನಲ್ಲಿ 4-1ರಿಂದ ಗೆಲುವು ಪಡೆದಿತ್ತು.
ರೊಮೆಲು ಲುಕಾಕು ಟೂರ್ನಿಯಲ್ಲಿ ಈ ತನಕ ಮೂರು ಗೋಲುಗಳನ್ನು ಗಳಿಸಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಯೂರಿ ಟೀಲೆಮನ್ಸ್ ಕೂಡ ಬೆಲ್ಜಿಯಮ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಲಿಯಾಂಡ್ರೊ ಟ್ರೋಸಾರ್ಡ್ ಎರಡು ಗೋಲುಗಳನ್ನು ಗಳಿಸಿ, ಎರಡು ಅಸಿಸ್ಟ್ ಮಾಡಿದ್ದಾರೆ.
ಸೆಮಿ ಫೈನಲ್‌ಗೆ ತಲುಪಲು ಯುರೋಪಿನ ಬಲಿಷ್ಠ ತಂಡಗಳು ಸಾಕಷ್ಟು ಬೆವರಿಳಿಸಬೇಕಾಗಿದೆ. ಸ್ಪೇನ್‌ನ ಚೆಂಡಿನ ಮೇಲಿನ ಹಿಡಿತ ಸಾಧಿಸುವ ಸಾಮರ್ಥ್ಯ ಹಾಗೂ ಆಕ್ರಮಣಕಾರಿ ಕ್ಷಮತೆಯು ಬೆಲ್ಜಿಯಮ್ ತಂಡದ ಆಟಗಾರರ ಶಾರೀರಕ ಶಕ್ತಿ, ಅನುಭವ ಹಾಗೂ ಪ್ರತಿ ದಾಳಿಯ ಭೀತಿಯನ್ನು ಎದುರಿಸಲಿದೆ.
ಸ್ಪೇನ್ ತಂಡವು ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿದ್ದರೆ, ಬೆಲ್ಜಿಯಮ್ ತಂಡವು ಒನಾನಾರಿಂದ ವಂಚಿತವಾಗಿದೆ. ಅವರು ಕಳೆದ ಪಂದ್ಯದ ವೇಳೆ ಗಾಯಗೊಂಡಿದ್ದರು.
ಸ್ಪೇನ್ ತಂಡವು ಮುಂದಿನ ಸುತ್ತಿಗೇರುವ ಫೇವರಿಟ್ ತಂಡವಾಗಿದೆ. ಆದರೆ ಬೆಲ್ಜಿಯಮ್ ತಂಡವನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ. ಬೆಲ್ಜಿಯಮ್ ಕೆಲವು ಉತ್ತಮ ಫುಟ್ಬಾಲ್ ಆಡಿದೆ. ಸ್ಪೇನ್ ತಂಡಕ್ಕೆ ಸಮಸ್ಯೆಯೊಡ್ಡಬಹುದು. ಕ್ವಾರ್ಟರ್ ಫೈನಲ್ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುವ ಹೆಚ್ಚಿನ ಸಾಧ್ಯತೆ ಇದೆ.