ಐಸಿಸಿ ಹಾಲ್ ಆಫ್ ಫೇಮ್‌ಗೆ ಸೌರವ್ ಗಂಗುಲಿ ಸೇರ್ಪಡೆ?
ಸೌರವ್ ಗಂಗುಲಿ | Photo Credit : BCCI
ಮುಂಬೈ, ಜು.8: ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ 12ನೇ ಭಾರತೀಯ ಹಾಗೂ 10ನೇ ಭಾರತೀಯ ಪುರುಷರ ಕ್ರಿಕೆಟಿಗನಾಗಲು ಸೌರವ್ ಗಂಗುಲಿ ಸಜ್ಜಾಗಿದ್ದಾರೆ. ಆಟಗಾರ ಹಾಗೂ ನಾಯಕನಾಗಿ ಭಾರತೀಯ ಕ್ರಿಕೆಟನ್ನು ಮರುರೂಪಿಸಿದ ಗಂಗುಲಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಜುಲೈ 11ರಂದು ತನ್ನ ವಾರ್ಷಿಕ ಸಮ್ಮೇಳನದ ನಂತರ ಐಸಿಸಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದೆ.
ಪಂದ್ಯದ ಇತಿಹಾಸವನ್ನು ರೂಪಿಸಲು ಕೊಡುಗೆ ನೀಡಿರುವ ಕ್ರಿಕೆಟಿಗರ ಎಲೈಟ್ ಗುಂಪಿಗೆ ಭಾರತದ ಮಾಜಿ ನಾಯಕ ಸೇರಲಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಸಾರ್ವಜನಿಕರ ನಂಬಿಕೆ ಕಳೆದುಕೊಂಡ ಸಂದರ್ಭ 2000ರಲ್ಲಿ ಭಾರತ ತಂಡದ ನಾಯಕತ್ವವಹಿಸಿದ್ದ ಗಂಗುಲಿ, ಯುವಕರ ಬೆನ್ನಿಗೆ ನಿಂತಿದ್ದರು. ವೀರೇಂದ್ರ ಸೆಹ್ವಾಗ್‌ಗೆ ಇನಿಂಗ್ಸ್ ಆರಂಭಿಸಲು ಉತ್ತೇಜನ ನೀಡಿದ್ದರು. ಆಸ್ಟ್ರೇಲಿಯ ವಿರುದ್ಧ ಹರ್ಭಜನ್ ಸಿಂಗ್‌ಗೆ ಸ್ಪಿನ್ ದಾಳಿಯ ನೇತೃತ್ವವಹಿಸಿದರು. ಗಂಗುಲಿ ನಾಯಕತ್ವದಲ್ಲಿ ಯುವರಾಜ್ ಸಿಂಗ್, ಝಹೀರ್ ಖಾನ್, ಆಶೀಷ್ ನೆಹ್ರಾ ಹಾಗೂ ಮುಹಮ್ಮದ್ ಕೈಫ್ ಬೆಳಕಿಗೆ ಬಂದಿದ್ದರು.
ಭಾರತದ ಐಸಿಸಿ ಹಾಲ್ ಆಫ್ ಫೇಮ್ ವಿಜೇತರ ಪಟ್ಟಿ: ಬಿಷನ್ ಸಿಂಗ್ ಬೇಡಿ(2009), ಸುನೀಲ್ ಗವಾಸ್ಕರ್(2009), ಕಪಿಲ್ ದೇವ್(2010), ಅನಿಲ್ ಕುಂಬ್ಳೆ(2015), ರಾಹುಲ್ ದ್ರಾವಿಡ್(2018), ಸಚಿನ್ ತೆಂಡುಲ್ಕರ್(2019), ವಿನೂ ಮಂಕಡ್ (2021), ಡಯಾನ ಎಡುಲ್ಜಿ(2023), ವೀರೇಂದ್ರ ಸೆಹ್ವಾಗ್(2023), ನೀತು ಡೇವಿಡ್(2024), ಎಂ.ಎಸ್. ಧೋನಿ(2025).