ಮೂರನೇ ಟಿ-20 | ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು
Photo Credit : @BCCI
ಟ್ರೆಂಟ್‌ಬ್ರಿಡ್ಜ್, ಜು.8: ಆಲ್‌ರೌಂಡ್ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡವು ಮಂಗಳವಾರ ನಡೆದ ಮೂರನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವನ್ನು 125 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯವು ಮಳೆಗಾಹುತಿಯಾಗಿತ್ತು.
ಗೆಲ್ಲಲು 202 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು 11.4 ಓವರ್‌ಗಳಲ್ಲಿ ಕೇವಲ 76 ರನ್‌ಗೆ ಆಲೌಟಾಯಿತು. ಪುರುಷರ ಟಿ-20 ಇತಿಹಾಸದಲ್ಲಿ ಅತಿದೊಡ್ಡ ರನ್ ಅಂತರದ ಸೋಲು ಕಂಡಿದೆ. ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ತನ್ನ ಎರಡನೇ ಕನಿಷ್ಠ ಸ್ಕೋರ್ ಗಳಿಸಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು ಫಿಲಿಪ್ ಸಾಲ್ಟ್ ಅರ್ಧಶತಕದ(70 ರನ್, 44 ಎಸೆತ)ನೆರವಿನಿಂದ 7 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ಅರ್ಷದೀಪ್ ಸಿಂಗ್ ನೇತೃತ್ವದ ಭಾರತದ ಹೊಸ ಚೆಂಡಿನ ದಾಳಿಯು ಆರಂಭದಲ್ಲಿ ಶಿಸ್ತುಬದ್ಧವಾಗಿತ್ತು. 36 ರನ್ ಗಳಿಸಿದ ಜೋಸ್ ಬಟ್ಲರ್ ಪಂದ್ಯದ ದಿಕ್ಕು ಬದಲಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಪ್ರಿನ್ಸ್ ಯಾದವ್, ತನ್ನ ಮೊದಲ ಎಸೆತದಲ್ಲೇ ಬಟ್ಲರ್ ವಿಕೆಟನ್ನು ಪಡೆದು ಮಿಂಚಿದರು.
ಹರ್ಷಿತ್ ರಾಣಾ ಅವರು ಸತತ ಎಸೆತಗಳಲ್ಲಿ ಜೇಕಬ್ ಬೆಥೆಲ್ ಹಾಗೂ ಟಾಮ್ ಬಾಂಟನ್ ವಿಕೆಟ್‌ಗಳನ್ನು ಪಡೆದರು. ಆರಂಭಿಕ ಆಟಗಾರ ಸಾಲ್ಟ್ ಅರ್ಧಶತಕ ಗಳಿಸಿ ತಂಡವನ್ನು ಆಧರಿಸಿದರು.
ಸ್ಯಾಮ್ ಕರನ್ 24 ಎಸೆತಗಳಲ್ಲಿ ಔಟಾಗದೆ 41 ರನ್ ಗಳಿಸಿ ಇಂಗ್ಲೆಂಡ್ ಸ್ಕೋರನ್ನು 200ರ ಗಡಿ ದಾಟಿಸಿದರು. ಪ್ರಿನ್ಸ್ ಯಾದವ್(2-30)ಹಾಗೂ ಹರ್ಷಿತ್ ರಾಣಾ(2-40)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ರನ್ ಚೇಸ್ ವೇಳೆ ಭಾರತದ ಬ್ಯಾಟಿಂಗ್ ಸರದಿಯನ್ನು ಇಂಗ್ಲೆಂಡ್ ವೇಗದ ಬೌಲರ್‌ಗಳು ಬೇಗನೆ ಭೇದಿಸಿದರು. ವೈಭವ್ ಸೂರ್ಯವಂಶಿ(13 ರನ್, 5 ಎಸೆತ) ಜೋಫ್ರಾ ಆರ್ಚರ್‌ಗೆ (3-29)ವಿಕೆಟ್ ಒಪ್ಪಿಸಿದರು.ನಾಯಕ ಶ್ರೇಯಸ್ ಅಯ್ಯರ್ (5 ರನ್) ಹಾಗೂ ಅಕ್ಷರ್ ಪಟೇಲ್‌ರನ್ನು (10 ರನ್) ಆರ್ಚರ್ ಪೆವಿಲಿಯನ್‌ಗೆ ಕಳುಹಿಸಿದರು.
ಭಾರತ ತಂಡವು ಟಿ-20 ಇತಿಹಾಸದಲ್ಲಿ ಇದೇ ಮೊದಲ ಬಾರಿ ಆರು ಓವರ್‌ನೊಳಗೆ ತನ್ನಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋಶ್ ಟಾಂಗ್(4-28) ಅವರು ಇಶಾನ್ ಕಿಶನ್(13 ರನ್), ಅಭಿಷೇಕ್ ಶರ್ಮಾ(10 ರನ್), ಶಿವಂ ದುಬೆ (2 ರನ್) ಹಾಗೂ ಹರ್ಷಿತ್ ರಾಣಾ (9 ರನ್) ವಿಕೆಟ್‌ಗಳನ್ನು ಪಡೆದರು.
ಐರ್‌ಲ್ಯಾಂಡ್ ವಿರುದ್ಧ 0-2 ಅಂತರದಿಂದ ಸರಣಿ ಸೋತಿದ್ದ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದೆ. ಭಾರತ ತಂಡವು ಟಿ-20 ವಿಶ್ವಕಪ್ ಎತ್ತಿ ಹಿಡಿದ ನಂತರ ಒಂದೂ ಪಂದ್ಯವನ್ನು ಗೆದ್ದಿಲ್ಲ.