ಎಂಬಾಪೆ ವಿರುದ್ಧ ಮತ್ತೊಮ್ಮೆ ಕೀಳುಮಟ್ಟದ ವಾಗ್ದಾಳಿ ನಡೆಸಿದ ಪರಾಗ್ವೆಯ ಸೆನೆಟರ್
ಸೆಲೆಸ್ಟೆ ಅಮರಿಲ್ಲಾ | ಕಿಲಿಯನ್ ಎಂಬಾಪೆ Photo: x.com/THE_SCORELINE
ಅಸುನ್ಸಿಯೋನ್: ಫ್ರಾನ್ಸ್ ತಂಡದ ಸ್ಟ್ರೈಕರ್ ಕಿಲಿಯನ್ ಎಂಬಾಪೆ ವಿರುದ್ಧ ಮತ್ತೊಮ್ಮೆ ಕೀಳುಮಟ್ಟದ ವಾಗ್ದಾಳಿ ನಡೆಸಿರುವ ಪರಾಗ್ವೆಯ ಸೆನೆಟರ್ ಸೆಲೆಸ್ಟೆ ಅಮರಿಲ್ಲಾ ಅವರು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಫಿಫಾ ವಿಶ್ವಕಪ್ ಪಂದ್ಯದಲ್ಲಿ ಪರಾಗ್ವೆ ವಿರುದ್ಧ ಫ್ರಾನ್ಸ್ 1-0 ಅಂತರದ ಜಯ ಗಳಿಸಿದ ಬಳಿಕ ಎಂಬಾಪೆ ಅವರನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿರುವ ಸೆನೆಟರ್, ಇದೀಗ ಸೆನೆಟ್ ಸಭೆಯಲ್ಲೇ ಅತ್ಯಂತ ಕೀಳುಮಟ್ಟದ ಪದಬಳಕೆಯ ಮೂಲಕ ವಾಗ್ದಾಳಿ ನಡೆಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅಮರಿಲ್ಲಾ ಅವರು ಎಕ್ಸ್ ಮಾಧ್ಯಮದಲ್ಲಿ ಜನಾಂಗೀಯ ನಿಂದನೆಗಳಿಂದ ಕೂಡಿದ ಸುದೀರ್ಘ ಪೋಸ್ಟ್ ಒಂದನ್ನು ಬರೆದಿದ್ದು, ಅದರಲ್ಲಿ ಎಂಬಾಪೆ ಅವರನ್ನು ವಸಾಹತುಶಾಹಿಗೆ ಒಳಗಾದ ಕ್ಯಾಮರೂನ್ ಪ್ರಜೆಯು, ಫ್ರೆಂಚ್ ಪ್ರಜೆಯಾಗಿ ಗುರುತಿಸಿಕೊಳ್ಳಲು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಅವರು ಬರೆಯುವುದನ್ನು ಕಲಿಯದ ಒಬ್ಬ ಅಸಭ್ಯ/ಮೃಗೀಯ ವ್ಯಕ್ತಿ. ಪಂದ್ಯ ಮುಗಿದ ನಂತರ ಪರಾಗ್ವೆ ತಂಡದ ಆಟಗಾರರು ಅವನಿಗೆ ಕಪಾಳಮೋಕ್ಷ ಮಾಡಬೇಕಿತ್ತು ಎಂದು ಹೇಳಿದ್ದರು.
ತನ್ನ ಆಟಗಾರನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಪರಾಗ್ವೆಯ ಸೆನೆಟರ್ ವಿರುದ್ಧ ಫ್ರಾನ್ಸ್ ಫುಟ್ಬಾಲ್ ಫೆಡರೇಷನ್ ತೀವ್ರವಾಗಿ ಉತ್ತರಿಸಿತ್ತು. ಸೆಲೆಸ್ಟೆ ಅಮರಿಲ್ಲಾ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರಾಸಿಕ್ಯೂಟರ್ ಕಚೇರಿಗೆ ವರದಿ ಸಲ್ಲಿಸುವುದಾಗಿ ಫೆಡರೇಷನ್ ತಿಳಿಸಿತ್ತು ಎಂದು ಅಲ್ ಜಝೀರಾ ವರದಿ ಮಾಡಿದೆ.
ನಿಂದನಾತ್ಮಕ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಎಂಬಾಪೆ, "ಮೇಡಮ್ ಸೆಲೆಸ್ಟೆ ಅಮರಿಲ್ಲಾ, ನೀವು ಒಬ್ಬ ತಿರಸ್ಕಾರಾರ್ಹ ಮಹಿಳೆ ಮತ್ತು ನಿಮ್ಮ ಹುದ್ದೆಗೆ ಲಾಯಕ್ಕಿಲ್ಲದವರು. ಇಡೀ ಪಂದ್ಯಾವಳಿಯುದ್ದಕ್ಕೂ ದೇಶದ ಮೇಲಿನ ತೀವ್ರ ಪ್ರೀತಿ ಮತ್ತು ಗೌರವಕ್ಕಾಗಿ ಬೆವರು ಹರಿಸಿದ ಆ ಪರಾಗ್ವೆ ದೇಶವನ್ನು ನೀವು ಪ್ರತಿನಿಧಿಸುವುದಿಲ್ಲ," ಎಂದು ಹೇಳುವ ಮೂಲಕ ಪರಾಗ್ವೆ ತಂಡದ ಆಟಗಾರರನ್ನೂ ಬೆಂಬಲಿಸಿದ್ದರು.
“ತನ್ನ ಹುದ್ದೆಗೆ ಲಾಯಕ್ಕಿಲ್ಲ” ಎಂದು ಕರೆದಿದ್ದಾರೆ ಎಂದು ವರದಿಯಾದ ನಂತರ ಈ ಜಗಳ ಮತ್ತಷ್ಟು ತಾರಕಕ್ಕೇರಿದ್ದು, ಇದಕ್ಕೆ ಪ್ರತಿಯಾಗಿ, ಅಮರಿಲ್ಲಾ ಅವರು ಬುಧವಾರ ಸೆನೆಟ್ ಸಭೆಯಲ್ಲೇ ಎಂಬಾಪೆಯನ್ನು ಕೀಳುಮಟ್ಟದಲ್ಲಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಪಂದ್ಯದ ನಂತರ ಪರಾಗ್ವೆಯ ಗೋಲ್‌ಕೀಪರ್ ಒರ್ಲ್ಯಾಂಡೊ ಗಿಲ್ ಅವರೊಂದಿಗೆ ಕೈಕುಲುಕಲು ಎಂಬಾಪೆ ನಿರಾಕರಿಸಿದ್ದರ ಕುರಿತು ಅಮರಿಲ್ಲಾ ಮತ್ತೊಮ್ಮೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಥೆಂಟಿಕ್ ರಾಡಿಕಲ್ ಲಿಬರಲ್ ಪಾರ್ಟಿಗೆ ಸೇರಿದ ಈ ಸೆನೆಟರ್, "ಫ್ರಾನ್ಸ್ ಎಂದರೆ ರೂಸೋ, ಡೆಕಾರ್ಟೆಸ್, ಮಾಂಟೆಸ್ಕ್ಯೂ, ವಿಕ್ಟರ್ ಹ್ಯೂಗೋ, ಸಿಮೋನ್ ಡಿ ಬೋವೊಯಿರ್ ಮತ್ತು ಮಾನವ ಹಾಗೂ ನಾಗರಿಕರ ಹಕ್ಕುಗಳ ಘೋಷಣೆ. ಆ ಮಹಾನ್ ಫ್ರಾನ್ಸ್ ದೇಶವನ್ನು ಮತ್ತು ಅದರ ಬೃಹತ್ ಸಾಂಸ್ಕೃತಿಕ, ಕಲಾತ್ಮಕ ಹಾಗೂ ಪ್ರಜಾಪ್ರಭುತ್ವದ ಪರಂಪರೆಯನ್ನು ಕೇವಲ ಎಂಬಾಪೆಗೆ ಸೀಮಿತಗೊಳಿಸಲು ನಾನು ನಿರಾಕರಿಸುತ್ತೇನೆ" ಎಂದು ಹೇಳಿದ್ದಾರೆ.
"ಪರಾಗ್ವೆಯವರ ಜೊತೆ ಆಟವಾಡಬೇಡ, ಎಂಬಾಪೆ," ಎಂದು ಅವರು ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಅವರ ಉದಾಹರಣೆಯನ್ನು ನೀಡಿ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ರೊನಾಲ್ಡಿನೊ ಮಾರ್ಚ್ 2020ರಲ್ಲಿ ಪರಾಗ್ವೆಯಲ್ಲಿ ಜೈಲು ಪಾಲಾಗಿದ್ದರು.