ವಿಂಬಲ್ಡನ್ ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಅರ್ನವ್ ಪಪಾರ್ಕರ್
ಲಿಯಾಂಡರ್ ಪೇಸ್ ಬಳಿಕ ಈ ಸಾಧನೆ ಮಾಡಿದ ಭಾರತೀಯ
ಅರ್ನವ್ ಪಪಾರ್ಕರ್ (Photo source: Instagram/Arnav Paparkar)
ಲಂಡನ್: ಭಾರತದ ಆಟಗಾರ ಅರ್ನವ್ ಪಪಾರ್ಕರ್ ವಿಂಬಲ್ಡನ್ ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದ್ದು, 36 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್ ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1990 ರಲ್ಲಿ ಲಿಯಾಂಡರ್ ಪೇಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಯಾವುದೇ ಭಾರತೀಯ ಆಟಗಾರ ಪ್ರತಿಷ್ಠಿತ ವಿಂಬಲ್ಡನ್ನಲ್ಲಿ ಈ ಸಾಧನೆಯನ್ನು ಮಾಡಿರಲಿಲ್ಲ.
ಅರ್ನವ್ ಪಪಾರ್ಕರ್ ಕೆಳಹಂತದ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಂದ ಆರಂಭಿಸಿ, ಅಂತಿಮವಾಗಿ ಉನ್ನತ ಮಟ್ಟದ ಪಂದ್ಯಾವಳಿಗಳಿಗೆ ಪ್ರವೇಶಿಸುವ ಮೂಲಕ ಹಂತ ಹಂತವಾಗಿ ಯಶಸ್ಸಿನ ಏಣಿಯನ್ನೇರಿದ್ದಾರೆ. 18 ವರ್ಷದ ಅರ್ನವ್ ಈ ವರ್ಷ ಜೂನಿಯರ್ ವಿಭಾಗದಲ್ಲಿ ತಮ್ಮ ಕೊನೆಯ ಸೀಸನ್ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಜೂನಿಯರ್ ಸ್ಪರ್ಧೆಗಳಲ್ಲಿ ಆಡಲು ಪ್ರಾರಂಭಿಸಿದರು.
ಜೂನಿಯರ್ ಶ್ರೇಯಾಂಕದಲ್ಲಿ 19ನೇ ಸ್ಥಾನದಲ್ಲಿರುವ ಅರ್ನವ್, ಜಪಾನ್ನ ರಿಯೋ ತಬಾಟಾ ಅವರನ್ನು ಕೇವಲ 52 ನಿಮಿಷಗಳಲ್ಲಿ 6-2, 6-1 ಸೆಟ್ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಪಪಾರ್ಕರ್ ಪ್ರಭಾವಶಾಲಿ ಸರ್ವಿಂಗ್ ಮೂಲಕ ಪಂದ್ಯದಲ್ಲಿ ಗಮನ ಸೆಳೆದರು. ತಮ್ಮ ಮೊದಲ ಸರ್ವ್ನಲ್ಲಿ 25 ಪಾಯಿಂಟ್ಗಳಲ್ಲಿ 23 ಪಾಯಿಂಟ್ಗಳನ್ನು ಗೆದ್ದರು. ಎಂಟು ಏಸ್ಗಳನ್ನು ಸಿಡಿಸಿ ಮೇಲುಗೈ ಸಾಧಿಸಿ ಅರ್ಹವಾಗಿಯೇ ಪಂದ್ಯವನ್ನು ಗೆದ್ದರು.
ಕ್ವಾರ್ಟರ್ ಫೈನಲ್ ನಲ್ಲಿ ಅವರು ಅಮೆರಿಕಾದ ಜೋರ್ಡಾನ್ ಲೀ ಅವರನ್ನು ಎದುರಿಸಲಿದ್ದಾರೆ.
ಈ ಮೊದಲು, 2009 ರಲ್ಲಿ ಜೂನಿಯರ್ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಯುಕಿ ಭಾಂಬ್ರಿ, ಅದೇ ವರ್ಷ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಜೂನಿಯರ್ ಗ್ರ್ಯಾಂಡ್ ಸ್ಲ್ಯಾಮ್ ಕ್ವಾರ್ಟರ್ ಫೈನಲ್ ತಲುಪಿದ ಕೊನೆಯ ಭಾರತೀಯರಾಗಿ ಯುಕಿ ಭಾಂಬ್ರಿ ಉಳಿದಿದ್ದರು. ಇದೀಗ ವಿಂಬಲ್ಡನ್ ನಲ್ಲಿ ಪಪಾರ್ಕರ್ ಆ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.