×
Ad

FIFA ವಿಶ್ವಕಪ್ 2026 | ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಹುಲ್ಲಿನ ಹಾಸು ಅಳವಡಿಕೆ ಕಾರ್ಯ ಆರಂಭ

Update: 2026-05-08 22:35 IST

Photo Credit : @C_Arnold01

ಈಸ್ಟ್ ರುದರ್‌ಫೋರ್ಡ್, ಮೇ 8: ಫೈನಲ್ ಸೇರಿದಂತೆ ಒಟ್ಟು ಎಂಟು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಅಮೆರಿಕದ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಹುಲ್ಲಿನ ಮೈದಾನವನ್ನು ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಾರ್ಮಿಕರು ಈಗಾಗಲೇ ಕ್ರೀಡಾಂಗಣದಲ್ಲಿ ನೈಸರ್ಗಿಕ ಹುಲ್ಲಿನ ಹಾಸನ್ನು ಅಳವಡಿಸುವ ಕೆಲಸವನ್ನು ಆರಂಭಿಸಿದ್ದಾರೆ.

ಜೂನ್ 12ರಿಂದ ಆರಂಭವಾಗಲಿರುವ 48 ರಾಷ್ಟ್ರಗಳ ಈ ಬೃಹತ್ ಟೂರ್ನಿಯು ಒಟ್ಟು 104 ಪಂದ್ಯಗಳನ್ನು ಒಳಗೊಂಡಿದೆ. ಅಮೆರಿಕದ 11, ಮೆಕ್ಸಿಕೋದ 3 ಮತ್ತು ಕೆನಡಾದ 2 ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫಿಫಾ ಈ ಬಾರಿ ಎರಡು ವಿಭಿನ್ನ ರೀತಿಯ ಮೇಲ್ಮೈಗಳನ್ನು ಬಳಸುತ್ತಿದೆ.

ಬಿಸಿ ಹವಾಮಾನವಿರುವ ಸ್ಥಳಗಳಾದ ಈಸ್ಟ್ ರುದರ್‌ಫೋರ್ಡ್, ಗ್ವಾಡಲಜಾರಾ, ಕ್ಯಾನ್ಸಾಸ್ ಸಿಟಿ, ಮಯಾಮಿ ಗಾರ್ಡನ್ಸ್, ಮಾಂಟೆರಿ ಮತ್ತು ಸಾಂಟಾ ಕ್ಲಾರಾಗಳಲ್ಲಿ ‘ಬರ್ಮುಡಾ’ ಹುಲ್ಲನ್ನು ಬಳಸಲಾಗುತ್ತದೆ.

ಅದೇ ರೀತಿ, ತಂಪಾದ ಹವಾಮಾನವಿರುವ ಒಳಾಂಗಣ ಕ್ರೀಡಾಂಗಣಗಳಾದ ಆರ್ಲಿಂಗ್ಟನ್, ಅಟ್ಲಾಂಟಾ, ಫಾಕ್ಸ್‌ಬೋರೊ, ಹ್ಯೂಸ್ಟನ್, ಇಂಗಲ್‌ವುಡ್, ಮೆಕ್ಸಿಕೊ ಸಿಟಿ, ಫಿಲಡೆಲ್ಫಿಯಾ, ಸಿಯಾಟಲ್, ಟೊರೊಂಟೊ ಮತ್ತು ವ್ಯಾಂಕೋವರ್‌ಗಳಲ್ಲಿ ‘ಕೆಂಟಕಿ ಬ್ಲೂಗ್ರಾಸ್’ ಜೊತೆ ಮಿಶ್ರ ಮಾಡಿದ ‘ಪೆರೆನಿಯಲ್ ರೈ’ ಹುಲ್ಲನ್ನು ಬಳಸಲಾಗುವುದು ಎಂದು ಫಿಫಾ ತಿಳಿಸಿದೆ.

ಈ ಪಂದ್ಯಾವಳಿಗಾಗಿ ಬೇಕಾದ ಹುಲ್ಲನ್ನು ಸುಮಾರು 10 ತಿಂಗಳ ಹಿಂದೆಯೇ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದ 10 ವಿಶೇಷ ತೋಟಗಳಲ್ಲಿ ಬೆಳೆಸಲಾಗಿತ್ತು. ಮೆಟ್‌ಲೈಫ್ ಕ್ರೀಡಾಂಗಣಕ್ಕಾಗಿ ನಾರ್ತ್ ಕ್ಯಾರೊಲಿನಾದಿಂದ ಸುಮಾರು 600 ಹುಲ್ಲಿನ ಹೊದಿಕೆಗಳನ್ನು ತರಿಸಲಾಗಿದ್ದು, ಬುಧವಾರದಿಂದ ಅಳವಡಿಕೆ ಕಾರ್ಯ ಆರಂಭವಾಗಿದೆ.

ಮೈದಾನವನ್ನು ನಿರ್ಮಿಸುವ ವಿಧಾನ ಹೀಗಿದೆ: ಮೊದಲು, ‘ಪರ್ಮಾವಾಯ್ಡ್’ ಎಂಬ ವಿಶೇಷ ಬಟ್ಟೆಯೊಂದಿಗೆ 18ರಿಂದ 24 ಇಂಚಿನಷ್ಟು ಮರಳು ತುಂಬಿಸಲಾಗುವುದು. ನಂತರ, ಗಾಳಿ ಸಂಚಾರಕ್ಕಾಗಿ ವಾತಾಯನ ಪದರ ನಿರ್ಮಿಸಲಾಗುವುದು. ಬಳಿಕ ಅದರ ಮೇಲೆ ಮತ್ತೆ ಮರಳು ತುಂಬಿಸಿ, ಅಂತಿಮವಾಗಿ ಹುಲ್ಲನ್ನು ಹಾಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News