ಸ್ಪೇನ್ ವಿರುದ್ಧ 1–0 ಗೆಲುವು; ನಾಲ್ಕನೇ ಬಾರಿ ಹಾಕಿ ವಿಶ್ವಕಪ್ ಗೆದ್ದ ಜರ್ಮನಿ
Photo Credit: FIH
ವಾವ್ರೆ (ಬೆಲ್ಜಿಯಂ): ಸ್ಪೇನ್ ತಂಡವನ್ನು 1–0 ಗೋಲಿನಿಂದ ಮಣಿಸಿದ ಜರ್ಮನಿ, ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಗೆದ್ದುಕೊಂಡಿದೆ. ಇದರೊಂದಿಗೆ ಜರ್ಮನಿ ನಾಲ್ಕು ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಪಾಕಿಸ್ತಾನದ ಜತೆ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿದೆ.
ಬೆಲ್ಜಿಯಂನ ವಾವ್ರೆಯಲ್ಲಿರುವ ಬೆಲ್ಫಿಯಸ್ ಹಾಕಿ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಕೆಲ್ ಸ್ಟ್ರೂಥಾಫ್ ಜರ್ಮನಿಯ ಗೆಲುವಿನ ಏಕೈಕ ಗೋಲು ಗಳಿಸಿದರು.
ಮೂರನೇ ಕ್ವಾರ್ಟರ್ ಮುಗಿಯಲು ಒಂದು ನಿಮಿಷ ಬಾಕಿ ಇರುವಾಗ ಸ್ಟ್ರೂಥಾಫ್, ಸ್ಪೇನ್ ನ ಗೋಲ್‌ಕೀಪರ್ ರನ್ನು ದಾಟಿ ಓಡಿ ಚೆಂಡನ್ನು ನೆಟ್ ಗೆ ತಿರುಗಿಸುವ ಮೂಲಕ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಬಳಿಕ ಜರ್ಮನಿಯ ಗೋಲ್ ಕೀಪರ್ ಜೀನ್-ಪಾಲ್ ಡ್ಯಾನೆಬರ್ಗ್ ಹಲವು ಮಹತ್ವದ ಸೇವ್ ಗಳನ್ನು ಮಾಡಿ ತಂಡದ ಮುನ್ನಡೆಯನ್ನು ಉಳಿಸಿದರು. ಸ್ಪೇನ್ ನಾಲ್ಕು ಪೆನಾಲ್ಟಿ ಕಾರ್ನರ್ ಗಳನ್ನು ಪಡೆದರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಸೆಮಿಫೈನಲ್ ನಲ್ಲಿ ಸ್ಪೇನ್ 4–3 ಅಂತರದಿಂದ ಸಹ ಆತಿಥೇಯ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿತ್ತು. ಜರ್ಮನಿ 2–1 ಅಂತರದಿಂದ ಅರ್ಜೆಂಟೀನಾವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿತ್ತು.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3–1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಈ ಬಾರಿಯ ಹಾಕಿ ವಿಶ್ವಕಪ್ ಅನ್ನು ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಜಂಟಿಯಾಗಿ ಆಯೋಜಿಸಿದ್ದವು.