ಝಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಕ್ಕೆ 7 ವಿಕೆಟ್ ಜಯ
Photo Credit: X/@ICC
ವಿಂಡ್‌ಹೋಕ್ (ನಮೀಬಿಯ), ಆ. 29: ನಮೀಬಿಯದ ವಿಂಡ್‌ಹೋಕ್‌ನಲ್ಲಿ ಶನಿವಾರ ನಡೆದ ಟಿ20 ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ, ಡೆವಾಲ್ಡ್ ಬ್ರೆವಿಸ್‌ರ ಬಿರುಸಿನ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡವು ಝಿಂಬಾಬ್ವೆ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ.
ಬ್ರೆವಿಸ್ ಕೇವಲ 32 ಎಸೆತಗಳಲ್ಲಿ 75 ರನ್‌ಗಳನ್ನು ಸಿಡಿಸಿ ಅಜೇಯವಾಗುಳಿದರು.
ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಎರಡನೇ ಹಂತದ ತಂಡದೊಂದಿಗೆ ಕಣಕ್ಕಿಳಿದಿದ್ದ ದಕ್ಷಿಣ ಆಫ್ರಿಕ, ಆರಂಭಿಕ ಪಂದ್ಯದಲ್ಲಿ ಆತಿಥೇಯ ನಮೀಬಿಯ ವಿರುದ್ಧ ಅನುಭವಿಸಿದ ಸೋಲಿನಿಂದ ಚೇತರಿಸಿಕೊಂಡಿತು. ಗೆಲುವಿಗೆ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಫ್ರಿಕ, ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಝಿಂಬಾಬ್ವೆ, ಆರಂಭಿಕ ಆಟಗಾರರಾದ ಬ್ರಯಾನ್ ಬೆನೆಟ್ ಮತ್ತು ಬೆನ್ ಕ್ಯಾರನ್ ಅವರ ಉತ್ತಮ ಆರಂಭದ ಹೊರತಾಗಿಯೂ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಜೋಡಿ 5.1 ಓವರ್‌ಗಳಲ್ಲಿ 45 ರನ್ ಸೇರಿಸಿತು. ಬೆನೆಟ್ 35 ಎಸೆತಗಳಲ್ಲಿ 34 ರನ್ ಮತ್ತು ಕ್ಯಾರನ್ 12 ಎಸೆತಗಳಲ್ಲಿ 24 ರನ್ ಗಳಿಸಿದರು.
ಬಳಿಕ, ದಕ್ಷಿಣ ಆಫ್ರಿಕದ ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ಝಿಂಬಾಬ್ವೆ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪ್ರೆನೆಲನ್ ಸುಬ್ರಾಯನ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರೆ, ಬ್ಯೋರ್ನ್ ಫೋರ್ಚುಯಿನ್ 4 ಓವರ್‌ಗಳಲ್ಲಿ 25 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.
ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ ಅವರ ಅವಳಿ ಸಹೋದರ, ವೇಗದ ಬೌಲರ್ ಡುವಾನ್ ಯಾನ್ಸೆನ್ ತನ್ನ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದುಬಾರಿಯಾದರೂ, 4 ಓವರ್‌ಗಳಲ್ಲಿ 45 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.