ಏಶ್ಯನ್ ಗೇಮ್ಸ್‌ನಿಂದ ಹೊರಬಿದ್ದ ನೀರಜ್ ಚೋಪ್ರಾ : ಭಾರತೀಯ ಅಭಿಯಾನಕ್ಕೆ ದೊಡ್ಡ ಹಿನ್ನಡೆ
Photo Credit: PTI
ಹೊಸದಿಲ್ಲಿ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಗಾಯದ ಕಾರಣದಿಂದಾಗಿ ಏಶ್ಯನ್ ಗೇಮ್ಸ್‌ನಿಂದ ಹೊರಬಿದ್ದಿದ್ದು, ಖಂಡ ಮಟ್ಟದ ಕ್ರೀಡಾಕೂಟಕ್ಕೆ ಮುನ್ನ ಭಾರತೀಯ ಅಭಿಯಾನಕ್ಕೆ ಭಾರೀ ಹಿನ್ನಡೆಯಾಗಿದೆ.
ಲೌಸಾನ್ ಡೈಮಂಡ್ ಲೀಗ್ ನಂತರ ತನ್ನ ಹಿಮ್ಮಡಿಯ ಗಾಯದ ಬಗ್ಗೆ ನೀರಜ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ. ಸಂಪೂರ್ಣ ವೈದ್ಯಕೀಯ ತಪಾಸಣೆಯ ನಂತರ, 2026ರ ಋತುವಿನ ಉಳಿದ ಕೂಟಗಳು ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ನೀರಜ್ ಪಾಲ್ಗೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಈ ಗಾಯದಿಂದಾಗಿ ಚೋಪ್ರಾ ಸೆಪ್ಟಂಬರ್ 5 ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್ ಮತ್ತು ಸೆಪ್ಟಂಬರ್ 11ರಿಂದ 13 ರವರೆಗೆ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ಉದ್ಘಾಟನಾ ಆವೃತ್ತಿಯ ವರ್ಲ್ಡ್ ಅತ್ಲೆಟಿಕ್ಸ್ ಅಲ್ಟಿಮೇಟ್ ಚಾಂಪಿಯನ್‌ಶಿಪ್ಸ್‌ನಿಂದಲೂ ಹೊರಗುಳಿಯಲಿದ್ದಾರೆ. ಕಳೆದ ಎರಡು ವರ್ಷಗಳ ಸತತ ಗಾಯದ ಸಮಸ್ಯೆಗಳ ನಂತರ ಈಗಷ್ಟೇ ಲಯ ಕಂಡುಕೊಳ್ಳುತ್ತಿದ್ದ ನೀರಜ್ ಅವರ ಹಾಲಿ ಕ್ರೀಡಾ ಋತುವಿಗೆ ಇದು ಅನಿರೀಕ್ಷಿತ ಅಂತ್ಯ ತಂದಿದೆ.
‘‘ಕಠಿಣ ಪರಿಶ್ರಮದ ನಂತರ, ಲೌಸಾನ್‌ನಲ್ಲಿ ಈ ಋತುವಿನ ಅತ್ಯುತ್ತಮ ಎಸೆತದೊಂದಿಗೆ ಬಯಸಿದ ಲಯವನ್ನು ಕೊನೆಗೂ ಕಂಡುಕೊಂಡೆ ಎಂದು ನಾನು ಭಾವಿಸಿದ್ದೆ’’ ಎಂದು ಚೋಪ್ರಾ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಹೇಳಿದ್ದಾರೆ.
‘‘ಆದರೆ ದುರದೃಷ್ಟವಶಾತ್, ಅದರ ಬೆನ್ನಲ್ಲೇ ತರಬೇತಿ ಸಮಯದಲ್ಲಿ ನನ್ನ ಹಿಮ್ಮಡಿಯ ಲಿಗಮೆಂಟ್ ಹರಿಯಿತು. ನನ್ನ ವೈದ್ಯರು ಮತ್ತು ತಂಡದೊಂದಿಗೆ ಚರ್ಚಿಸಿದ ನಂತರ, ಈ ಋತುವಿನ ಉಳಿದ ಭಾಗದಿಂದ ವಿಶ್ರಾಂತಿ ಪಡೆಯಲು ನಾವು ನಿರ್ಧರಿಸಿದ್ದೇವೆ. ಇದು ನಿಜಕ್ಕೂ ನಿರಾಸೆ ಮೂಡಿಸಿದೆ. ಮುಖ್ಯವಾಗಿ ನನ್ನ ಲಯ ಕಂಡುಕೊಂಡ ಕ್ಷಣದಲ್ಲೇ ಹೀಗಾಗಿದ್ದು ಬೇಸರ ತಂದಿದೆ. ಆದರೆ, ಹಿನ್ನಡೆಗಳೂ ಕ್ರೀಡಾ ಪಯಣದ ಒಂದು ಭಾಗ ಎಂಬ ಮಾತಿದೆ. ಈಗ ನನ್ನ ಸಂಪೂರ್ಣ ಗಮನ ಉತ್ತಮವಾಗಿ ಚೇತರಿಸಿಕೊಂಡು, ಇನ್ನಷ್ಟು ಬಲಿಷ್ಠವಾಗಿ ಕಣಕ್ಕೆ ಮರಳುವುದರ ಮೇಲಿದೆ’’ ಎಂಬುದಾಗಿ ಅವರು ಬರೆದಿದ್ದಾರೆ.
ಸಂಪೂರ್ಣ ದೈಹಿಕ ಕ್ಷಮತೆಯನ್ನು ಹೊಂದಿರದಿದ್ದರೂ, ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಹುಡುಗ ನೀರಜ್ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 85.83 ಮೀಟರ್ ಎಸೆದು ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಆ ನಂತರ ಲೌಸಾನ್ ಡೈಮಂಡ್ ಲೀಗ್‌ನಲ್ಲಿ 88.05 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ಋತುವಿನ ತನ್ನ ಅತ್ಯುತ್ತಮ ಪ್ರದರ್ಶನ ದಾಖಲಿಸಿದ್ದರು.