Photo Credit: x.com/RTLsportsbe

ಆ್ಯಮ್‌ಸ್ಟಲ್‌ವೀನ್ (ಬೆಲ್ಜಿಯಮ್): ಮಹಿಳಾ ಹಾಕಿ ವಿಶ್ವಕಪ್‌ನ ಮೂರನೇ ಸ್ಥಾನ ನಿರ್ಣಯಿಸುವ ಪ್ಲೇಆಫ್ ಪಂದ್ಯದಲ್ಲಿ ಶನಿವಾರ ಬೆಲ್ಜಿಯಂ ತಂಡವು ಆಸ್ಟ್ರೇಲಿಯವನ್ನು 1-0 ಗೋಲಿನಿಂದ ಸೋಲಿಸಿದೆ. ಇದರೊಂದಿಗೆ, ಬೆಲ್ಜಿಯಂ 48 ವರ್ಷಗಳ ಬಳಿಕ ಮಹಿಳೆಯರ ಹಾಕಿ ವಿಶ್ವಕಪ್ ಪದಕವೊಂದನ್ನು ಗೆದ್ದಿದೆ.

ಬೆಲ್ಜಿಯಮ್‌ನ ಆ್ಯಮ್‌ಸ್ಟಲ್‌ವೀನ್‌ನಲ್ಲಿರುವ ವ್ಯಾಗ್ನರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ನಿರ್ಣಾಯಕ ಗೆಲುವಿನ ಗೋಲನ್ನು ಶಾರ್ಲಟ್ ಎಂಗಲ್‌ಬರ್ಟ್ ಎರಡನೇ ಕ್ವಾರ್ಟರ್‌ನಲ್ಲಿ ದಾಖಲಿಸಿದರು.

ಮೊದಲ ಕ್ವಾರ್ಟರ್ ಯಾವುದೇ ಗೋಲಿಲ್ಲದೆ ಮುಕ್ತಾಯವಾಯಿತು. ಪಂದ್ಯದ ಅರ್ಧಾವಧಿಯಲ್ಲಿ ಬೆಲ್ಜಿಯಂ 1-0 ಮುನ್ನಡೆ ಗಳಿಸಿತು.

ನಂತರದ ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಯಾವುದೇ ತಂಡವು ಯಾವುದೇ ಗೋಲು ಗಳಿಸಲಿಲ್ಲ. ಪಂದ್ಯದ ಅಂತಿಮ ಕ್ಷಣಗಳಲ್ಲಿ ಆಸ್ಟ್ರೇಲಿಯ ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿದರೂ ಅವುಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

1978ರ ಮ್ಯಾಡ್ರಿಡ್ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದ ನಂತರ ಬೆಲ್ಜಿಯಂ ಗೆದ್ದ ಮೊದಲ ವಿಶ್ವಕಪ್ ಪದಕ ಇದಾಗಿದೆ. 2022ರ ವಿಶ್ವಕಪ್‌ನಲ್ಲಿ ರೆಡ್ ಪ್ಯಾಂತರ್ಸ್ ಆರನೇ ಸ್ಥಾನ ಪಡೆದಿತ್ತು.

ಅದೇ ವೇಳೆ, 2022ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನದ ಪಂದ್ಯದಲ್ಲಿ ಜರ್ಮನಿ ವಿರುದ್ಧ 2-1 ಅಂತರದಲ್ಲಿ ಗೆದ್ದು ಕಂಚು ಪಡೆದಿದ್ದ ಆಸ್ಟ್ರೇಲಿಯ ಈ ಬಾರಿ ಪದಕ ವಂಚಿತವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor