ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಹಾಕಿ ಇಂಡಿಯಾ ಅಧ್ಯಕ್ಷ ಅತೃಪ್ತಿ
Photo Credit: ANI
ಹೊಸದಿಲ್ಲಿ: ಎಫ್‌ಐಎಚ್ ಹಾಕಿ ವಿಶ್ವಕಪ್ 2026ರಲ್ಲಿ ಭಾರತೀಯ ಪುರುಷರ ತಂಡದ ಪ್ರದರ್ಶನದ ಬಗ್ಗೆ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ತಿರ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ತಂಡವು ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಎಂಟನೇ ಸ್ಥಾನವನ್ನು ಗಳಿಸಿದೆ. ಶುಕ್ರವಾರ ವಾವರ್‌ನ ಬೆಲ್ಫಿಯಸ್ ಹಾಕಿ ಅರೀನಾದಲ್ಲಿ ನಡೆದ 7 ಮತ್ತು 8ನೇ ಸ್ಥಾನ ನಿರ್ಣಯದ ಪ್ಲೇಆಫ್ ಪಂದ್ಯದಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಸಹ-ಆತಿಥೇಯ ಬೆಲ್ಜಿಯಂ ತಂಡವು ಭಾರತ 4-3 ಅಂತರದಿಂದ ಸೋಲಿಸಿತು.
ಬೆಲ್ಜಿಯಂ ವಿರುದ್ಧದ ಸೋಲಿಗೆ ಮುನ್ನ, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು ಅರ್ಜೆಂಟೀನ ವಿರುದ್ಧ 5-3, ನೆದಲ್ಯಾರ್ಂಡ್ಸ್ ವಿರುದ್ಧ 3-1 ಮತ್ತು ಇಂಗ್ಲೆಂಡ್ ವಿರುದ್ಧ 4-2 ಅಂತರದ ಸೋಲುಗಳನ್ನು ಕಂಡಿತ್ತು ಹಾಗೂ ಪಾಕಿಸ್ತಾನದ ವಿರುದ್ಧ 5-3 ಮತ್ತು ವೇಲ್ಸ್ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತ್ತು.
ಶನಿವಾರ ಹೊಸದಿಲ್ಲಿಯ ಮೇಜರ್ ಧ್ಯಾನಚಂದ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಂದರ್ಭದಲ್ಲಿ ಎಎನ್‌ಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ತಿರ್ಕೆ, ಹಿಂದಿನ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿದ್ದರೂ ವಿಶ್ವಕಪ್‌ನಲ್ಲಿ ಪುರುಷರ ತಂಡ ನಿರೀಕ್ಷೆಗಳನ್ನು ಮುಟ್ಟಲು ವಿಫಲವಾಗಿದೆ ಎಂದರು.
ಆಟಗಾರರು ಭಾರತಕ್ಕೆ ಮರಳಿದ ನಂತರ ಹಾಕಿ ಇಂಡಿಯಾ ಈ ಅಭಿಯಾನದ ಪರಾಮರ್ಶೆ ನಡೆಸಲಿದೆ ಎಂದು ಹೇಳಿದ ಅವರು, ಇದೀಗ ಮುಂಬರುವ ಏಶ್ಯನ್ ಗೇಮ್ಸ್‌ನತ್ತ ಗಮನ ಹರಿಸಲಾಗುವುದು ಎಂದರು.