×
Ad

ಬುಧವಾರ ಇಂಗ್ಲೆಂಡ್ ವಿರುದ್ಧ ಮೊದಲ ಟಿ20: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Update: 2025-01-21 21:03 IST

ಸಾಂದರ್ಭಿಕ ಚಿತ್ರ | PC : PTI

ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯು ಬುಧವಾರ ಆರಂಭವಾಗಲಿದ್ದು, ಸೂರ್ಯಕುಮಾರ್ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಶುಭಾರಂಭದ ನಿರೀಕ್ಷೆಯಲ್ಲಿದೆ.

ದೀರ್ಘ ಸಮಯದ ನಂತರ ಟೀಮ್ ಇಂಡಿಯಾಕ್ಕೆ ವಾಪಸಾಗಿರುವ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರತ್ತ ಎಲ್ಲರ ಚಿತ್ತ ಹರಿದಿದೆ.

3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಒಳಗೊಂಡಿರುವ ಪ್ರಸಕ್ತ ಸರಣಿಯು ಉಭಯ ತಂಡಗಳಿಗೆ ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ತಯಾರಿಗೆ ಉತ್ತಮ ಅವಕಾಶವಾಗಿದೆ.

ವಾಂಖೆಡೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ 57ಕ್ಕೆ 7 ವಿಕೆಟ್‌ಗಳ ಸಹಿತ ಒಟ್ಟು 24 ವಿಕೆಟ್‌ಗಳನ್ನು ಉರುಳಿಸಿದ್ದ ಶಮಿ ಅವರು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದರು.

ಶಮಿ ತನ್ನ ಟಿ20 ವೃತ್ತಿಜೀವನದಲ್ಲಿ ಕಡಿಮೆ ಅವಧಿಯಲ್ಲಿ 29.62ರ ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಸರ್ಜರಿಗೆ ಕಾರಣವಾಗಿದ್ದ ಕಾಲುನೋವಿನಿಂದಾಗಿ ಶಮಿ ಅವರು 2023ರ ನವೆಂಬರ್ 19ರಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ರಣಜಿಯಲ್ಲಿ ಬಂಗಾಳದ ಪರ 7 ವಿಕೆಟ್ ಗೊಂಚಲು ಪಡೆದಿದ್ದ ಶಮಿ, ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿದ್ದರು. ವಿಜಯ್ ಹಝಾರೆ ಟ್ರೋಫಿ(5 ವಿಕೆಟ್)ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(7 ವಿಕೆಟ್)ಯಲ್ಲೂ ಮಿಂಚಿದ್ದರು. 2014ರಲ್ಲಿ ಟಿ20 ಕ್ರಿಕೆಟಿಗೆ ಕಾಲಿಟ್ಟ ನಂತರ ಶಮಿ ಅವರು ಕೇವಲ 23 ಪಂದ್ಯಗಳಲ್ಲಿ ಆಡಿದ್ದು, 2022ರಲ್ಲಿ ಟಿ20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಆಡಿದ್ದರು.

ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಇದೇ ಮೊದಲ ಬಾರಿ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ. ವಿಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಪಟೇಲ್ 8 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸತತ ಶತಕವನ್ನು ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಕೇರಳದ ಆಟಗಾರ ಇದೀಗ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರೊಂದಿಗೆ ಭರವಸೆಯ ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ ನಾಯಕತ್ವ ಹಾಗೂ ಮುಖ್ಯ ಕೋಚ್ ಬ್ರೆಂಡನ್ ಮಕೆಲಮ್ ಕೋಚಿಂಗ್‌ನಲ್ಲಿ ಹೊಸ ಯುಗ ಆರಂಭಿಸಲು ಸಜ್ಜಾಗಿದೆ. ಪ್ರಮುಖ ಆಟಗಾರರಾದ ಸ್ಯಾಮ್ ಕರನ್, ವಿಲ್ ಜಾಕ್ಸ್ ಹಾಗೂ ರೀಸಿ ರಿಪ್ಲೆ ತಂಡದಲ್ಲಿಲ್ಲ. ವೇಗಿಗಳಾದ ಜೋಫ್ರಾ ಆರ್ಚರ್ ಹಾಗೂ ಮಾರ್ಕ್‌ವುಡ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ.

ಇಂಗ್ಲೆಂಡ್ ತಂಡವು ಭಾರತದಲ್ಲಿ ಆಡಿರುವ 11 ಟಿ20 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. 2011ರಲ್ಲಿ ಕೊನೆಯ ಬಾರಿ ದ್ವಿಪಕ್ಷೀಯ ಟಿ20 ಸರಣಿಯನ್ನು 1-0 ಅಂತರದಿಂದ ಜಯಿಸಿದೆ. ಈ ಹಿಂದಿನ ಸರಣಿಯಲ್ಲಿ ಭಾರತವು 3-2 ಅಂತರದಿಂದ ಜಯ ಸಾಧಿಸಿದೆ.

ತಂಡಗಳು

*ಭಾರತ(ಸಂಭಾವ್ಯ)11ರ ಬಳಗ: 1.ಅಭಿಷೇಕ್ ಶರ್ಮಾ, 2.ಸಂಜು ಸ್ಯಾಮ್ಸನ್, 3. ಸೂರ್ಯಕುಮಾರ್, 4.ತಿಲಕ್ ವರ್ಮಾ, 5. ಹಾರ್ದಿಕ್ ಪಾಂಡ್ಯ, 6. ರಿಂಕು ಸಿಂಗ್, 7. ಅಕ್ಷರ್ ಪಟೇಲ್, 8. ಮುಹಮ್ಮದ್ ಶಮಿ, 9. ಅರ್ಷದೀಪ್ ಸಿಂಗ್, 10.ನಿತೀಶ್ ರಾಣಾ, 11.ವರುಣ್ ಚಕ್ರವರ್ತಿ.

*ಇಂಗ್ಲೆಂಡ್ ಆಡುವ 11ರ ಬಳಗ: ಬೆನ್ ಡಕೆಟ್, ಫಿಲ್ ಸಾಲ್ಟ್(ವಿಕೆಟ್‌ಕೀಪರ್), ಜೋಸ್ ಬಟ್ಲರ್(ನಾಯಕ), ಹ್ಯಾರಿ ಬ್ರೂಕ್, ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್, ಜಮಿ ಒವರ್ಟನ್, ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News