ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಹುದ್ದೆಗಾಗಿ ಮೈಕಲ್ ಹಸ್ಸಿ ಸಂಪರ್ಕಿಸಿದ ಫ್ಲೆಮಿಂಗ್

Update: 2026-08-05 21:31 IST

ಮೈಕಲ್ ಹಸ್ಸಿ | Photo Credit : PTI 

ಲಂಡನ್, ಆ.5: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಫ್ರಾಂಚೈಸಿಯೊಂದಿಗಿನ ತನ್ನ ದೀರ್ಘ ನಂಟನ್ನು ಕಡಿದುಕೊಂಡಿರುವ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ತನ್ನ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಳ್ಳುವಂತೆ ಸಿಎಸ್‌ಕೆಯ ಮಾಜಿ ಬ್ಯಾಟರ್ ಮೈಕಲ್ ಹಸ್ಸಿಯವರನ್ನು ಸಂಪರ್ಕಿಸಿದ್ದಾರೆ.

ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಆಗಲು ತಮಗೆ ಆಸಕ್ತಿಯಿದೆಯೇ ಎಂದು ಫ್ಲೆಮಿಂಗ್ ಅವರು ಹಸ್ಸಿ ಅವರನ್ನು ಕೇಳಿದ್ದಾರೆ ಎಂದು 7 ಕ್ರಿಕೆಟ್ ವರದಿ ಮಾಡಿದೆ.

ಹಸ್ಸಿ ಅವರು 2018ರಿಂದ ಸಿಎಸ್‌ಕೆ ಕೋಚಿಂಗ್ ವಿಭಾಗದಲ್ಲಿ ಬ್ಯಾಟಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ಕೋಚಿಂಗ್ ಹುದ್ದೆವಹಿಸಿಕೊಳ್ಳಲು ಫ್ಲೆಮಿಂಗ್ ಅವರು ಐಪಿಎಲ್ ಫ್ರಾಂಚೈಸಿಯನ್ನು ತೊರೆದ ನಂತರ ತನ್ನ ಮಾಜಿ ಸಹ ಆಟಗಾರ ಹಾಗೂ ಸಹೋದ್ಯೋಗಿ ಹಸ್ಸಿ ಅವರನ್ನು ಮತ್ತೊಮ್ಮೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಟ್ಟಿಗೆ ಕೆಲಸ ಮಾಡಲು ಆಹ್ವಾನಿಸಿದ್ದಾರೆ.

ಸದ್ಯ ಮಾರ್ಕಸ್ ಟ್ರಸ್ಕೋತಿಕ್ ಅವರು ಇಂಗ್ಲೆಂಡ್‌ನ ಟೆಸ್ಟ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಪಾಕಿಸ್ತಾನದ ವಿರುದ್ಧದಮೂರು ಪಂದ್ಯಗಳ ಟೆಸ್ಟ್ ಸರಣಿಯ ತನಕ ಹಂಗಾಮಿ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಆದರೆ ತಂಡದಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಕುರಿತು ಅನಿಶ್ಚಿತತೆ ಇದೆ.

ಪುರುಷರ ಮೆನ್ಸ್ ಹಂಡ್ರೆಡ್‌ನಲಿ ವೆಲ್ಶ್ ಫಯರ್‌ಗೆ ತರಬೇತಿ ನೀಡುತ್ತಿರುವ ಹಸ್ಸಿ ಈ ಹಿಂದೆ ಇಂಗ್ಲೆಂಡ್ ತಂಡದೊಂದಿಗೆ ಕೆಲಸ ಮಾಡಿದ್ದರು. 2022ರ ಐಸಿಸಿ ಪುರುಷರ ಟಿ-20 ವಿಶ್ವಕಪ್‌ನ ವೇಳೆ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಇಂಗ್ಲೆಂಡ್ ಪ್ರಶಸ್ತಿ ಗೆದ್ದಾಗ ತಂಡದ ಭಾಗವಾಗಿದ್ದರು.

ಫ್ಲೆಮಿಂಗ್ ಹಾಗೂ ಹಸ್ಸಿ ಚೆನ್ನೈನಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಮೊದಲ ಬಾರಿ ಒಟ್ಟಿಗೆ ಆಡಿದ್ದರು. ಆ ನಂತರ ಫ್ಲೆಮಿಂಗ್ ಸಿಎಸ್‌ಕೆಯ ಮುಖ್ಯ ಕೋಚ್ ಆದರು. ಹಸ್ಸಿ ಕೋಚಿಂಗ್ ಸಿಬ್ಬಂದಿಯನ್ನು ಸೇರಿಕೊಳ್ಳುವ ಮೊದಲು ಚೆನ್ನೈ ಫ್ರಾಂಚೈಸಿ ಪರ ಅಡಿದ್ದರು. ಈ ಇಬ್ಬರು ಒಟ್ಟಿಗೆ 15 ವರ್ಷ ಕೆಲಸ ಮಾಡಿದ್ದಾರೆ.

ಫ್ಲೆಮಿಂಗ್ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಂಗ್ಲೆಂಡ್ ಟೆಸ್ಟ್ ಕೋಚ್ ಆಗಿ ತನ್ನ ಕೆಲಸ ಆರಂಭಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News