ಗ್ಲಾಸ್ಗೊ ಗೇಮ್ಸ್ ನಂತರ ಉಗಾಂಡದ ಕ್ರೀಡಾಪಟುಗಳು ನಾಪತ್ತೆ : ಸ್ಕಾಟ್‌ಲ್ಯಾಂಡ್ ಪೊಲೀಸರಿಂದ ತನಿಖೆ ಆರಂಭ

Update: 2026-08-05 19:40 IST

Photo Credit : X

ಹೊಸದಿಲ್ಲಿ, ಆ.5: ಕಳೆದ ರವಿವಾರ ಗ್ಲಾಸ್ಗೊದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಮುಕ್ತಾಯಗೊಂಡ ನಂತರ ಪಾಕಿಸ್ತಾನದ ಓರ್ವ ಬಾಕ್ಸರ್ ಮಾತ್ರವಲ್ಲ, ಉಗಾಂಡದ ಹಲವಾರು ಕ್ರೀಡಾಪಟುಗಳು ಕೂಡ ತಮ್ಮ ದೇಶಕ್ಕೆ ಮರಳಿಲ್ಲ ಎಂಬ ವರದಿಗಳ ಕುರಿತು ಸ್ಕಾಟ್‌ಲ್ಯಾಂಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘‘ಸ್ಕಾಟ್‌ಲ್ಯಾಂಡ್ ಪೊಲೀಸರು ಹಲವಾರು ಕ್ರೀಡಾಪಟುಗಳು ಕಾಣೆಯಾಗಿದ್ದಾರೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ. ಸಂದರ್ಭಗಳನ್ನು ನಿರ್ಣಯಿಸಲು ವಿಚಾರಣೆಗಳು ನಡೆಯುತ್ತಿವೆ. ಗೃಹ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’’ ಎಂದು ವಕ್ತಾರರು ಮಂಗಳವಾರ ಹೇಳಿದ್ದಾರೆಂದು ‘ಅಲ್ ಜಝೀರಾ’ ವರದಿ ಮಾಡಿದೆ.

ಉಗಾಂಡ ತಂಡವು ಮಂಗಳವಾರ ತಾಯ್ನಾಡಿಗೆ ವಾಪಸಾಗುವ ಮೊದಲು ಆರು ಬಾಕ್ಸರ್‌ಗಳ ಪೈಕಿ ನಾಲ್ವರು ಕಾಣೆಯಾಗಿದ್ದರು ಎಂದು ಉಗಾಂಡದ ‘ಎನ್‌ಬಿಎಸ್ ಸ್ಪೋರ್ಟ್ಸ್’ ವರದಿ ಮಾಡಿದೆ.

ಪಾಕಿಸ್ತಾನದ ಬಾಕ್ಸರ್ ಖುದ್ರತುಲ್ಲಾ ತನ್ನ ದೇಶದ ತಂಡವು ಗ್ಲಾಸ್ಗೊದಿಂದ ನಿರ್ಗಮಿಸುವ ಕೆಲವೇ ಗಂಟೆಗಳ ಮೊದಲು ನಾಪತ್ತೆಯಾಗಿದ್ದರು. ಖುದ್ರತುಲ್ಲಾ ತಾನು ತಂಗಿದ್ದ ಹೊಟೇಲ್ ರೂಮ್‌ನಲ್ಲಿ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಕೊನೆಯ ಬಾರಿ ಕಾಣಿಸಿಕೊಂಡಿದ್ದರು ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಬೆಳಗ್ಗೆ 9 ಗಂಟೆಗೆ ಪಾಕಿಸ್ತಾನ ತಂಡವು ವಿಮಾನ ನಿಲ್ದಾಣಕ್ಕೆ ತೆರಳುವ ಸಿದ್ಧ್ದತೆಯಲ್ಲಿದ್ದಾಗ ಖುದ್ರತುಲ್ಲಾ ತನ್ನ ಕೊಠಡಿಯಲ್ಲಿ ಇಲ್ಲದಿರುವುದು ಗೊತ್ತಾಗಿದೆ. ಅವರ ಪಾಸ್‌ಪೋರ್ಟ್ ಹಾಗೂ ರಿಟರ್ನ್ ಟಿಕೆಟ್‌ಗಳು ತಂಡದ ವ್ಯವಸ್ಥಾಪಕರ ಬಳಿ ಇತ್ತು ಎಂದು ವರದಿಯಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ಕ್ರೀಡಾಪಟುಗಳು ಕಾಣೆಯಾದ ಪ್ರಕರಣಗಳು ಈ ಹಿಂದಿನ ಆವೃತ್ತಿಗಳ ಗೇಮ್ಸ್‌ನಲ್ಲೂ ನಡೆದಿದೆ. 2018ರ ಗೋಲ್ಡ್‌ಕೋಸ್ಟ್ ಕ್ರೀಡಾಕೂಟದ ನಂತರ ಆಸ್ಟ್ರೇಲಿಯದ ಅಧಿಕಾರಿಗಳು ಒಂದು ತಿಂಗಳ ನಂತರವೂ 50 ಕ್ರೀಡಾಪಟುಗಳು ಹಾಗೂ ಅಧಿಕಾರಿಗಳನ್ನು ಹುಡುಕುತ್ತಿದ್ದರು.

ಪಾಕಿಸ್ತಾನದ 21ರ ಸದಸ್ಯರ ಅತ್ಲೀಟ್‌ಗಳ ತಂಡವು ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೇವಲ ಒಂದು ಪದಕ ಗೆದ್ದಿದೆ. ಬಾಕ್ಸರ್ ಫಾತಿಮಾ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತನಗೆ ಭಾರತದ ಬಾಕ್ಸಿಂಗ್ ಕ್ವೀನ್ ಮೇರಿ ಕೋಮ್ ಸ್ಫೂರ್ತಿಯಾಗಿದ್ದಾರೆಂದು ಫಾತಿಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News