×
Ad

ಫ್ರೆಂಚ್ ಓಪನ್ | ಫ್ಲಾವಿಯೊ ಕೊಬೊಲಿ ಸೆಮಿಫೈನಲ್‌ಗೆ ಲಗ್ಗೆ

Update: 2026-06-04 22:36 IST

Photo Credit: X/@ActionNetworkHQ

ಪ್ಯಾರಿಸ್, ಜೂ. 4: ಬುಧವಾರ ನಡೆದ ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುಟಿದೆದ್ದು ಸೆಮಿಫೈನಲ್ ತಲುಪಿದ್ದಾರೆ. ಅವರು ಕೆನಡದ ಫೆಲಿಕ್ಸ್ ಆಗರ್-ಅಲಿಯಾಸಿಮ್‌ರನ್ನು 4-6, 6-4, 6-4, 6-4 ಸೆಟ್‌ಗಳಿಂದ ಸೋಲಿಸಿದರು.

ಮಣ್ಣಿನ ಅಂಗಳದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಇಟಲಿಯ ಅಗ್ರ ಶ್ರೇಯಾಂಕದ ಜನ್ನಿಕ್ ಸಿನ್ನರ್ ಫೈನಲ್ ತಲುಪುವುದು ಬಹುತೇಕ ಖಚಿತ ಎಂಬುದಾಗಿ ಪಂದ್ಯಾವಳಿಯ ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಅವರು ಎರಡನೇ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡು ಹೊರಬಿದ್ದರು.

ಸಿನ್ನರ್ ನಿರ್ಗಮನದಿಂದ ಸಿಕ್ಕ ಈ ಅವಕಾಶವನ್ನು ಅವರ ಮೂವರು ದೇಶಬಾಂಧವರು ಈಗ ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ, ಇಟಲಿಯ ಮಟೇಯೊ ಬೆರೆಟಿನಿ ಗಾಯಗೊಂಡು ನಿವೃತ್ತಿಹೊಂದಿದ ಬಳಿಕ ಅವರದೇ ದೇಶದ ಮಟೇಯೊ ಅರ್ನಾಲ್ಡಿ ಸೆಮಿಫೈನಲ್ ತಲುಪಿದ್ದಾರೆ. ಅವರು ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ 10ನೇ ಶ್ರೇಯಾಂಕದ ಕೊಬೊಲಿ ಅವರನ್ನು ಎದುರಿಸಲಿದ್ದಾರೆ.

ಇದು ಗ್ರ್ಯಾನ್ ಸ್ಲಾಮ್ ಇತಿಹಾಸದಲ್ಲೇ, ಇಟಲಿಯ ಇಬ್ಬರು ಪುರುಷ ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಿರುವ ಮೊದಲ ಸೆಮಿಫೈನಲ್ ಪಂದ್ಯವಾಗಲಿದೆ.

ಮೊದಲ ಮೂರು ಸೆಟ್‌ಗಳವರೆಗೆ ಸಮಬಲದ ಹೋರಾಟ ಕಂಡ ಕ್ವಾರ್ಟರ್‌ಫೈನಲ್‌ನ ನಾಲ್ಕನೇ ಸೆಟ್‌ನ ಐದನೇ ಗೇಮ್‌ನಲ್ಲಿ ಕೊಬೊಲಿ ನಿರ್ಣಾಯಕ ‘ಸರ್ವ್ ಬ್ರೇಕ್’ ಮಾಡುವಲ್ಲಿ ಯಶಸ್ವಿಯಾದರು.

ನಂತರ ತನ್ನ ಸರ್ವ್‌ಅನ್ನು ಯಶಸ್ವಿಯಾಗಿ ಕಾಯ್ದುಕೊಂಡ ಅವರು, ಕೊನೆಯಲ್ಲಿ ಭರ್ಜರಿ ಕ್ರಾಸ್-ಕೋರ್ಟ್ ಫೋರ್‌ಹ್ಯಾಂಡ್ ಬಾರಿಸಿದರು ಹಾಗೂ ತನ್ನ ಕ್ರೀಡಾ ಜೀವನದ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡರು.

ಮಟೇಯೊ ಅರ್ನಾಲ್ಡಿ ಸೆಮಿಫೈನಲ್‌ಗೆ ಲಗ್ಗೆ

ಬುಧವಾರ ನಡೆದ ಇಟಲಿ ಆಟಗಾರರ ನಡುವಿನ ಇನ್ನೊಂದು ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ, ಮಟೇಯೊ ಅರ್ನಾಲ್ಡಿ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರ ಎದುರಾಳಿ ಮಟೇಯೊ ಬೆರೆಟಿನಿ ಪಂದ್ಯದ ನಡುವೆ ಗಾಯಗೊಂಡು ನಿವೃತ್ತಿಗೊಂಡ ಬಳಿಕ ಅರ್ನಾಲ್ಡಿ ಸೆಮಿಫೈನಲ್ ತಲುಪಿದರು.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಬೆರಟಿನಿ ಮೊದಲ ಸೆಟ್ಟನ್ನು 5-7ರಿಂದ ಕಳೆದುಕೊಂಡಿದ್ದರು. ಎರಡನೇ ಸೆಟ್‌ನಲ್ಲೂ 2-5ರ ಹಿನ್ನಡೆಯಲ್ಲಿದ್ದಾಗ ಅವರು ಗಾಯ ನಿವೃತ್ತಿಗೊಂಡರು.

ಇದದರೊಂದಿಗೆ, ಅರ್ನಾಲ್ಡಿ ತನ್ನ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದರು.

ಎರಡನೇ ಸೆಟ್‌ನಲ್ಲಿ, ಮೂರು ಗೇಮ್‌ಗಳ ನಂತರ ಸೊಂಟದ ನೋವಿನಿಂದಾಗಿ ವೈದ್ಯಕೀಯ ವಿರಾಮ ಪಡೆದ ಬೆರೆಟಿನಿ, ನಂತರ ತನ್ನ ತಂಡದ ಸಲಹೆಯ ಮೇರೆಗೆ ಪಂದ್ಯದಿಂದ ಹಿಂದೆ ಸರಿದರು.

ಅರ್ನಾಲ್ಡಿ ಶುಕ್ರವಾರ ಸೆಮಿಫೈನಲ್‌ನಲ್ಲಿ ತನ್ನದೇ ದೇಶದ ಫ್ಲಾವಿಯೊ ಕೊಬೊಲಿ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News