×
Ad

IPL 2027ರಲ್ಲಿ ಆಡುವುದು ಅನುಮಾನ: ಸುಳಿವು ನೀಡಿದ ಪ್ಯಾಟ್ ಕಮಿನ್ಸ್

Update: 2026-06-03 22:19 IST

Photo: IANS

ಹೊಸದಿಲ್ಲಿ, ಜೂ.3: ವೃತ್ತಿಜೀವನದ ನಿರಂತರ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ತನ್ನ ಮೇಲಿನ ಕೆಲಸದ ಭಾರವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ 2027ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸುಳಿವು ನೀಡಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ 150ನೇ ಟೆಸ್ಟ್ ಪಂದ್ಯ, ಪ್ರತಿಷ್ಠಿತ ಆ್ಯಶಸ್ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ.

ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪ್ರಮುಖ ಅಂತರರಾಷ್ಟ್ರೀಯ ಸರಣಿಗಳಿಗೆ ಸಂಪೂರ್ಣ ಸಿದ್ಧತೆ ನಡೆಸಲು ಕೆಲವು ತ್ಯಾಗಗಳು ಅನಿವಾರ್ಯ ಎಂದು ‘ದಿ ಏಜ್‌’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಮಿನ್ಸ್ ಹೇಳಿದ್ದಾರೆ.

ಐಪಿಎಲ್ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿರುವ ಅವರು, ಫ್ರಾಂಚೈಸಿ ಕ್ರಿಕೆಟ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ವಿಶ್ವಕಪ್‌ಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಆ್ಯಶಸ್ ಸರಣಿಗೆ ಮುನ್ನ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

33 ವರ್ಷದ ಕಮಿನ್ಸ್ ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬೆನ್ನುನೋವು ಆಗಾಗ ಕಾಡುತ್ತಿದೆ. ಹೀಗಾಗಿ ಆ್ಯಶಸ್ ಸರಣಿಗೆ ಮುನ್ನ ಪ್ರಮುಖ ವೇಗಿಗಳಾದ ಜೋಶ್ ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಅವರ ಕೆಲಸದ ಭಾರವನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ ಎಂದು ವರದಿಯಾಗಿದೆ.

2026ರ ಐಪಿಎಲ್‌ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸುವ ಮೊದಲು ಕಮಿನ್ಸ್ ಮೊದಲ ಏಳು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ತಂಡವನ್ನು ಮುನ್ನಡೆಸಿದ್ದರು. ಬಳಿಕ ಕಮಿನ್ಸ್ ನಾಯಕತ್ವದಲ್ಲಿ ತಂಡ ಪ್ಲೇಆಫ್ ತಲುಪಿದರೂ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News