×
Ad

ಇಂಡೋನೇಶ್ಯ ಓಪನ್‌ನಿಂದ ಹೊರಬಿದ್ದ ಪಿ.ವಿ.ಸಿಂಧು

Update: 2026-06-04 22:43 IST

ಪಿ.ವಿ.ಸಿಂಧು (Photo Credit: newsarenaindia)

ಜಕಾರ್ತ, ಜೂ. 4: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಗುರುವಾರ ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಅವರನ್ನು ವಿಶ್ವದ ನಂ. 1 ಆಟಗಾರ್ತಿ ದಕ್ಷಿಣ ಕೊರಿಯದ ಅನ್ ಸೆ ಯಂಗ್ 21-17, 21-14 ಗೇಮ್‌ಗಳಿಂದ ಸೋಲಿಸಿದರು.

ಇದು ಆನ್ ಸೆ ಯಗ್ ವಿರುದ್ಧ ಸಿಂಧು ಎರಡು ವಾರಗಳಲ್ಲಿ ಅನುಭವಿಸಿದ ಎರಡನೇ ಸೋಲಾಗಿದೆ. ಕಳೆದ ವಾರ ಸಿಂಗಾಪುರ ಓಪನ್ ಕ್ವಾರ್ಟರ್‌ಫೈನಲ್‌ನಲ್ಲೂ ಆನ್ ಸೆ ಯಂಗ್ ವಿರುದ್ಧ ಸಿಂಧು ಸೋತಿದ್ದರು. ಗುರುವಾರ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಉತ್ತಮ ಆಟ ಪ್ರದರ್ಶಿಸಿದರು. ಈ ಸೋಲಿನೊಂದಿಗೆ, ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಆಗಿರುವ ಅನ್ ಸೆ ಯಂಗ್ ವಿರುದ್ಧ ಸಿಂಧು ಅವರ ಸತತ ಸೋಲಿನ ಸರಣಿ 10 ಪಂದ್ಯಗಳಿಗೆ ವಿಸ್ತರಿಸಿದೆ. ಸಿಂಧು ಇದುವರೆಗೆ ಅನ್ ವಿರುದ್ಧ ಒಂದೂ ಪಂದ್ಯವನ್ನೂ ಗೆದ್ದಿಲ್ಲ.

ಮೊದಲ ಗೇಮ್‌ನ ಮಧ್ಯಭಾಗದಲ್ಲಿ ಇಬ್ಬರ ಸ್ಕೋರ್ 10-10 ರ ಸಮಬಲದಲ್ಲಿದ್ದಾಗ ಪಂದ್ಯವು ಅತ್ಯಂತ ರೋಚಕವಾಗಿತ್ತು. ಸಿಂದು ತನ್ನ ಅತ್ಯುತ್ತಮ ಫಾರ್ಮ್‌ನ ಕೆಲವು ತುಣುಕುಗಳನ್ನು ಪ್ರದರ್ಶಿಸುತ್ತಾ, ಕೆಲವೊಮ್ಮೆ ಕೊರಿಯದ ಆಟಗಾರ್ತಿಯನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು.

ಕೆಲವು ಅತ್ಯುತ್ತಮ ಹಾಗೂ ಆಕ್ರಮಣಕಾರಿ ಹೊಡೆತಗಳ ಮೂಲಕ ಸಿಂಧು 15-14 ರ ಮುನ್ನಡೆ ಕಾಯ್ದುಕೊಂಡರಾದರೂ, ಅನ್ ಸೆ ಯಂಗ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ತಿರುಗೇಟು ನೀಡಿ ಆ ಗೇಮನ್ನು ಗೆದ್ದುಕೊಂಡರು.

ಅದೇ ಲಯವನ್ನು ಎರಡನೇ ಗೇಮ್‌ಗೂ ಕೊಂಡೊಯ್ದ ಅನ್ ಪಂದ್ಯವನ್ನು ಸುಲಭವಾಗಿ ಗೆದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News