ಸೂರ್ಯವಂಶಿ ಕೇವಲ ರನ್‍ಮಿಷಿನ್ ಅಲ್ಲ; ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
ವೈಭವ್ ಸೂರ್ಯವಂಶಿ , ಸಚಿನ್ ತೆಂಡೂಲ್ಕರ್ | Photo Credit : PTI
ಹೊಸದಿಲ್ಲಿ: ಪ್ರಸಕ್ತ ವರ್ಷದ ಐಪಿಎಲ್‍ನಲ್ಲಿ ಅದ್ಭುತ ಸಾಧನೆ ಮಾಡಿದವರ ಪೈಕಿ ವೈಭವ್ ಸೂರ್ಯವಂಶಿ ಅಗ್ರಗಣ್ಯರು. 2025ರ ಐಪಿಎಲ್‍ನಲ್ಲಿ 35 ಎಸೆತಗಳಲ್ಲಿ ಶತಕ ಗಳಿಸಿದಾಗಲೇ ಈ ಉದಯೋನ್ಮುಖ ಪ್ರತಿಭೆಯ ಸಾಮರ್ಥ್ಯ ಕ್ರಿಕೆಟ್ ಜಗತ್ತಿಗೆ ಪರಿಚಯವಾಗಿತ್ತು. ಆದರೆ ಎರಡನೇ ಸೀಸನ್ ಈ ಯುವ ಬ್ಯಾಟ್ಸ್ ಮನ್ ಪಾಲಿಗೆ ಅಗ್ನಿಪರೀಕ್ಷೆ ಎನಿಸಿತ್ತು. ಏಕೆಂದರೆ ಎದುರಾಲಿಗಳು ಇವರ ಆಡುವ ಶೈಲಿಯ ಅರಿವು ಹೊಂದಿದ್ದರು, ತಂಡ ಹಾಗೂ ಅಭಿಮಾನಿಗಳ ನಿರೀಕ್ಷೆಗಳು ಬಹಳಷ್ಟು ಇದ್ದವು. ಆದರೆ ಸೂರ್ಯವಂಶಿ ಇವೆಲ್ಲವನ್ನೂ ಮೀರಿ ಅದ್ಭುತ ಸಾಧನೆ ಮಾಡಿದ್ದಾರೆ.
ಈ ಋತುವಿನಲ್ಲಿ 16 ಪಂದ್ಯಗಳಿಂದ 776 ರನ್‌ಗಳನ್ನು ಗಳಿಸಿರುವ ಸೂರ್ಯವಂಶಿ, ಖ್ಯಾತ ಅಂತರರಾಷ್ಟ್ರೀಯ ಆಟಗಾರರಿಂದ ಕೂಡಿದ್ದ ಈ ಲೀಗ್‍ನಲ್ಲಿ 750 ರನ್‍ಗಳ ಗಡಿ ದಾಟಿದ ಏಕೈಕ ಆಟಗಾರ. ಅವರ ಸಾಧನೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಯುವ ಪ್ರತಿಭೆ ತಾವು ಗಳಿಸಿದ ರನ್‍ಗಿಂತ ಆಚೆಗೆ ಕ್ರಿಕೆಟ್ ಆಟದ ಮೇಲೆ ಪ್ರಭಾವ ಬೀರಿದ್ದಾರೆ. ವಿರುದ್ಧ ತಂಡಗಳು ಅವರ ಬಗ್ಗೆ ಯೋಚಿಸುತ್ತಿವೆ. ತಂಡಗಳು ಅವರಿಗಾಗಿ ಯೋಜನೆ ರೂಪಿಸುತ್ತಿವೆ ಮತ್ತು ಅವರು ಕ್ರೀಸ್‍ಗೆ ಆಗಮಿಸುವ ಬಹಳಷ್ಟು ಮೊದಲೇ ಅಭಿಮಾನಿಗಳು ಕಾಯುತ್ತಿರುತ್ತಾರೆ" ಎಂದು ರೆಡ್ಡಿಟ್ ಪೋಸ್ಟ್ ನಲ್ಲಿ ತೆಂಡೂಲ್ಕರ್ ಬಣ್ಣಿಸಿದ್ದಾರೆ.
"ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ನಲ್ಲಿ ಕೂಡಾ ಕ್ಷಿಪ್ರವಾಗಿ ರನ್ ಗಳಿಸುವ ಅವರ ಸಾಮಥ್ರ್ಯ, ಒತ್ತಡ ಹೆಚ್ಚಿದಾಗಲೂ ತಮ್ಮ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವುದನ್ನು ಪ್ರದರ್ಶಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕ್ರೀಸ್‍ಗೆ ಬಂದಾಗಲೆಲ್ಲ ಬಹುಶಃ ರಾಯಸ್ಥಾನ ರಾಯಲ್ಸ್ ತಂಡದ ವಿಶ್ವಾಸ ಹೆಚ್ಚಿಸುತ್ತಿತ್ತು" ಎಂದು ವಿಶ್ಲೇಷಿಸಿದ್ದಾರೆ.
ಏತನ್ಮಧ್ಯೆ ಪ್ರಸಕ್ತ ಐಪಿಎಲ್‍ನಲ್ಲಿ ಐದು ವೈಯಕ್ತಿಕ ಪ್ರಶಸ್ತಿ ಜಯಿಸಿದ 15 ವರ್ಷದ ಯುವ ಆಟಗಾರನ ಬಗ್ಗೆ ಕೇಸ್‍ಸ್ಟಡಿ ನಡೆಸುವುದಾಗಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಪ್ರಕಟಿಸಿದೆ. ಪ್ರತಿಭೆ ಬೆಳವಣಿಗೆ, ಮಾನಸಿಕ ಸ್ಥಿತಿಸ್ಥಾಪಕತ್ವ, ಶಿಸ್ತು ಮತ್ತು ಧೀರ್ಘಾವಧಿ ಅಥ್ಲೀಟ್ ಪ್ರಗತಿ ಸೇರಿದಂತೆ ಅಧಿಕ ಕ್ಷಮತೆಯ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗುವುದು ಎಂದು ಹೇಳಿದೆ.