ರೈಫಲ್, ಪಿಸ್ತೂಲ್ ಶೂಟರ್‌ಗಳ ರಾಷ್ಟ್ರೀಯ ಆಯ್ಕೆ ಕ್ರೀಡಾಕೂಟ; ಅಗ್ರ ಸ್ಥಾನಗಳಲ್ಲಿ ರಾಹಿ, ಮೆಹುಲಿ, ನೀರಜ್
PC : X
ಡೆಹ್ರಾಡೂನ್: ಡೆಹ್ರಾಡೂನ್‌ನ ತ್ರಿಶೂಲ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಗ್ರೂಪ್ ಎ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳ ರಾಷ್ಟ್ರೀಯ ಆಯ್ಕೆ ಕ್ರೀಡಾಕೂಟ 3 ಮತ್ತು 4ರ ಐದನೇ ದಿನವಾದ ಶನಿವಾರ ಒಲಿಂಪಿಯನ್ ರಾಹಿ ಸರ್ನೊಬತ್, ಮಿಶ್ರ ತಂಡ ರೈಫಲ್ ಏಶ್ಯನ್ ಚಾಂಪಿಯನ್ ಮೆಹುಲಿ ಘೋಷ್ ಮತ್ತು ನೌಕಾಪಡೆಯ ನೀರಜ್ ಕುಮಾರ್ ತಮ್ಮ ವಿಭಾಗಗಳ ಫೈನಲ್‌ಗಳಲ್ಲಿ ಅಗ್ರ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ.
ಮಹಿಳೆಯರ 25 ಮೀಟರ್ ಪಿಸ್ತೂಲ್ ಟಿ4 ಫೈನಲ್ ನಲ್ಲಿ, 2018ರ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ರಾಹಿ ನಿರಾಳವಾಗಿ ಪ್ರದರ್ಶನ ನೀಡಿ ಅಗ್ರ ಸ್ಥಾನಿಯಾದರು. ಅವರು ಫೈನಲ್ ನಲ್ಲಿ 40 ಹಿಟ್‌ಗಳನ್ನು ಗಳಿಸಿದರು ಹಾಗೂ ದ್ವಿತೀಯ ಸ್ಥಾನಿಯಾದ ಮಹಾರಾಷ್ಟ್ರದ ಅಭಿದ್ನ್ಯಾ ಅಶೋಕ್ ಪಾಟೀಲ್ ಗಿಂತ ಆರು ಅಂಕಗಳಿಂದ ಮುಂದಿದ್ದಾರೆ. ಹರ್ಯಾಣದ ವಿಭೂತಿ ಭಾಟಿಯ 27 ಅಂಕಗಳೊಂದಿಗೆ ತೃತೀಯ ಸ್ಥಾನಿಯಾದರು.
ಮಹಿಳೆಯರ 10 ಮೀ.ಏರ್ ರೈಫಲ್ ಟಿ4 ಸ್ಪರ್ಧೆಯ ಫೈನಲ್ ನಲ್ಲಿ, ಮೆಹುಲಿ 253.6 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾದರು. ರೈಲ್ವೇಸ್‌ನ ಮೇಘನಾ ಎಮ್. ಸಜ್ಜನರ್ 253.1 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದರೆ, ಸೋನಮ್ ಉತ್ತಮ್ ಮಸ್ಕರ್ 231.4 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
50 ಮೀ.ರೈಫಲ್ 3 ಪೊಸಿಶನ್ಸ್ ಪುರುಷರ ಟಿ3 ಫೈನಲ್ ನಲ್ಲಿ ನೌಕಾಪಡೆಯ ನೀರಜ್ 463.9 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ಸೇನೆಯ ಬಾಬು ಸಿಂಗ್ ಪನ್ವರ್ 457.3 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, 2 ಬಾರಿಯ ಒಲಿಂಪಿಯನ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 447 ಅಂಕಗಳೊಂದಿಗೆ ಕಂಚಿಗೆ ತೃಪ್ತಿಪಟ್ಟರು.