ಯುಎಸ್ ಓಪನ್ | ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಜೊಕೊವಿಕ್
ನೊವಾಕ್ ಜೊಕೊವಿಕ್ | Photo Credit : PTI
ನ್ಯೂಯಾರ್ಕ್: ಮೊದಲ ಸುತ್ತಿನಲ್ಲೇ ಅರ್ಜೆಂಟೀನದ 48ನೇ ರ್ಯಾಂಕಿನ ಮರಿಯಾನೊ ನಾವೊನ್ ವಿರುದ್ಧ ಸೋತಿರುವ ನೊವಾಕ್ ಜೊಕೊವಿಕ್ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನಾವೋನ್ ಅವರು 7-6(7/5), 5-7, 4-6, 6-2, 6-1 ಸೆಟ್‌ಗಳ ಜಯ ಗಳಿಸಿ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಜೊಕೊವಿಕ್ ಅವರ ಕನಸನ್ನು ಭಗ್ನಗೊಳಿಸಿದರು. ಜೊಕೊವಿಕ್ 2023ರಿಂದ 25ನೇ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ.
2006ರ ಆಸ್ಟ್ರೇಲಿಯನ್ ಓಪನ್ ನಂತರ ಸರ್ಬಿಯದ ಆಟಗಾರ ಜೊಕೊವಿಕ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. 20 ವರ್ಷಗಳ ಹಿಂದೆ ಪೌಲ್ ಗೋಲ್ಡ್‌ಸ್ಟೇನ್‌ಗೆ ಸೋತಿದ್ದ ಜೊಕೊವಿಕ್ ಅವರ 78 ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ ಬಿದ್ದಿತ್ತು.
25ರ ವಯಸ್ಸಿನ ನಾವೊನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಇದೇ ಮೊದಲ ಬಾರಿ ಎಟಿಪಿಯ ಅಗ್ರ-10 ರ್ಯಾಂಕಿನಲ್ಲಿರುವ ಎದುರಾಳಿಯನ್ನು ಸೋಲಿಸಿದ್ದಾರೆ.
ಜೊಕೊವಿಕ್ ಟೆನಿಸ್ ಮೈದಾನದಲ್ಲಿ ವಾಂತಿ ಮಾಡುತ್ತಿರುವುದು ಕಂಡುಬಂತು. ಅರ್ಜೆಂಟೀನ ಆಟಗಾರನ ವಿರುದ್ಧ ಪಂದ್ಯದಲ್ಲಿ ಕಾಲು ನೋವಿನಿಂದ ಪರದಾಡಿದರು. ಕೊನೆಯ ಸೆಟ್‌ಗಿಂತ ಮೊದಲು ವೈದ್ಯಕೀಯ ಉಪಚಾರ ಪಡೆದರು. ನಾಲ್ಕು ಗಂಟೆ ಹಾಗೂ 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸೋಲನುಭವಿಸಿದರು.
ಡೇನಿಯಲ್ ಮೆಡ್ವೆಡೆವ್ ಶುಭಾರಂಭ
ನ್ಯೂಯಾರ್ಕ್: ಫ್ರಾನ್ಸ್ ಆಟಗಾರ ಹ್ಯೂಗೊ ಗಾಸ್ಟನ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಮಾಜಿ ಯುಎಸ್ ಓಪನ್ ಚಾಂಪಿಯನ್ ಡೇನಿಯಲ್ ಮೆಡ್ವೆಡೆವ್ 2026ರ ಆವೃತ್ತಿಯ ಯುಎಸ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಆಟಗಾರ ಮೆಡ್ವೆಡೆವ್ ಅವರು ಗಾಸ್ಟನ್‌ರನ್ನು 6-4, 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.
ಮೆಡ್ವೆಡೆವ್ ವರ್ಷದ ಹಿಂದೆ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಈ ಬಾರಿ ಆ ತಪ್ಪನ್ನು ಪುನರಾವರ್ತಿಸದೆ ಸುಲಭ ಜಯ ಗಳಿಸಿದರು.
ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಸೆಬಾಸ್ಟಿಯನ್ ಗೊರ್ಝಿ ಅಥವಾ ಬೆಲ್ಜಿಯಮ್‌ನ ರಾಫೆಲ್ ಕಾಲಿಗ್ನನ್‌ರನ್ನು ಎದುರಿಸಲಿದ್ದಾರೆ.